ಜಿಲ್ಲೆ

ಮಂಗಳಮುಖಿಯರ ಕಲ್ಯಾಣಕ್ಕೆ `ರೋಟರಿ’ ನೆರವು

ಬೀದರ್: ಶಿಕ್ಷಣ, ತರಬೇತಿ, ಉದ್ಯೋಗಾವಕಾಶ ದೊರಕಿಸಿಕೊಡಲು ರೋಟರಿ ಸಂಸ್ಥೆಯು ಮಂಗಳಮುಖಿಯರಿಗೆ ನೆರವಾಗಲಿದೆ ಎಂದು ರೋಟರಿ ಇಂಟರ್‍ನ್ಯಾಷನಲ್ ಡಿಸ್ಟ್ರಿಕ್ಟ್ ಗವರ್ನರ್ ಸತೀಶ ಓಮಿನಿ ಇಲ್ಲಿ ಪ್ರಕಟಿಸಿದರು.
ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ಮತ್ತು ವಿಜಯಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯು ಸಂಗಮ ಸಂಸ್ಥೆ, ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮಂಗಳಮುಖಿಯರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳಮುಖಿಯರು ಭಗವಂತನ ಮಕ್ಕಳು. ಅವರೂ ಇದೇ ಸಮಾಜದ ಅವಿಭಾಜ್ಯ ಅಂಗ. ತಾವು ಭಿನ್ನರು ಎಂಬ ಕೀಳರಿಮೆಯಿಂದ ಹೊರಬರಬೇಕು. ಸಮಾಜದ ಮುಖ್ಯವಾಹಿನಿಗೆ ಸೇರಿ, ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಮಂಗಳಮುಖಿಯರು ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ಮಾತು ಬದಲಾಗಬೇಕು. ಭಿಕ್ಷೆ ನಿಲ್ಲಿಸಬೇಕು ಎಂದು ಸಲಹೆ ನೀಡಿದರು. ಸ್ವಯಂ ಉದ್ಯೋಗ ಮತ್ತು ಬೇರೆ ಬೇರೆ ಉದ್ಯೋಗ ಪಡೆದುಕೊಳ್ಳಲು ಅಗತ್ಯವಿರುವ ತರಬೇತಿಯ ವ್ಯವಸ್ಥೆಯನ್ನು ರೋಟರಿ ಸಂಸ್ಥೆ ಮಾಡಲಿದೆ ಎಂದು ಭರವಸೆ ನೀಡಿದರು.
ಬಹುತೇಕ ಎಲ್ಲರೂ ಮಂಗಳಮುಖಿಯರನ್ನು ತಿರಸ್ಕಾರದಿಂದ ಕಾಣುತ್ತಾರೆ. ಆದರೆ, ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ಮತ್ತು ವಿಜಯಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯವರು ಸೇರಿಕೊಂಡು ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಿರುವುದು ಮಾದರಿಯಾಗಿದೆ. ಎರಡೂ ಸಂಸ್ಥೆಗಳ ಪ್ರಮುಖರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸಂಜಯ ಹತ್ತಿ ಮಾತನಾಡಿ, ಮಂಗಳಮುಖಿಯರು ಮನಸ್ಸು ಮಾಡಿದ್ದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು. ಹಲವು ಬಗೆಯ ಉದ್ಯೋಗಗಳಿವೆ. ತರಬೇತಿ ಪಡೆಯುವುದೂ ಸರಳವಾಗಿದೆ. ರೋಟರಿ ಸಂಸ್ಥೆಯೂ ತರಬೇತಿಗೆ ನೆರವು ನೀಡಲಿದೆ ಎಂದು ಹೇಳಿದರು.
ರೋಟರಿ ಸಂಸ್ಥೆಯು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಮಂಗಳಮುಖಿಯರೂ ಇದರಲ್ಲಿ ಭಾಗಿಯಾಗಬೇಕು. ನಿರ್ಲಕ್ಷಿತರು ಎಂಬ ನೋವಿನಿಂದ ಹೊರಬರಬೇಕು. ಗೌರವಪೂರ್ಣ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಚರ್ಮರೋಗತಜ್ಞ ಡಾ. ಅಶೋಕಕುಮಾರ ನಾಗೂರೆ ಮಾತನಾಡಿ,  ಮಂಗಳಮುಖಿಯರು ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದರು. ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಂತೆ ನಡೆಯಬೇಕು. ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆಗೆ ಜಿಲ್ಲಾ ಆಸ್ಪತ್ರೆಯಲ್ಲೂ ಸೌಲಭ್ಯವಿದೆ ಎಂದರು.
ನಗರಸಭೆ ಸದಸ್ಯ ರಾಜಾರಾಮ, ವಿಜಯಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ವಿಜಯಾ ಹತ್ತಿ, ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ಅಧ್ಯಕ್ಷೆ ಡಾ. ಸುಜಾತಾ ಹೊಸಮನಿ, ಕಾರ್ಯದರ್ಶಿ ಅಶ್ವಿನಿ ಸ್ವಾಮಿ,  ದಂತತಜ್ಞ ಡಾ. ಧೂಳಪ್ಪ ಪಾಟೀಲ್, ನೇತ್ರತಜ್ಞ ಡಾ. ಗೋವಿಂದರಾಜ ಬಚ್ಚಾ, ಡಾ. ಸುಲೋಚನಾ ಪಾಟೀಲ, ಜಿಲ್ಲಾ ಏಡ್ಸ್ ನಿಯಂತ್ರಣ ಸಂಸ್ಥೆಯ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ್ ಮತ್ತಿತರ ಗಣ್ಯರು, ಮಂಗಳಮುಖಿಯರಾದ ಜರೀನಾ, ಭೂಮಿಕಾ ಅವರೂ ವೇದಿಕೆಯಲ್ಲಿದ್ದರು. ಮಂಗಳಮುಖಿಯರನ್ನು ಸನ್ಮಾನಿಸಲಾಯಿತು. ನೇತ್ರ, ದಂತ, ಚರ್ಮ ರೋಗಗಳ ತಪಾಸಣೆ ನಡೆಯಿತು.