ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರ ರಾತ್ರಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಮೂಲಕ 5 ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ತಮಿಳುನಾಡು ಸೇರಿದಂತೆ ಬೆಂಗಳೂರು, ಮೈಸೂರು, ರಾಮನಗರ, ಕನಕಪುರ, ಚನ್ನಪಟ್ಟಣ, ಬಿಡದಿ, ಮದ್ದೂರು, ಹಲಗೂರು, ಸಾತನೂರು, ಹಾರೋಹಳ್ಳಿ, ಮಳವಳ್ಳಿ, ಮಂಡ್ಯ, ನಂಜನಗೂಡು ಹಾಗೂ ರಾಜ್ಯದ ಇನ್ನಿತರ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇಗುಲದಲ್ಲಿ ಜರುಗಿದ ಎಣ್ಣೆಮಜ್ಜನ ಸೇವೆ, ಅಮಾವಾಸ್ಯೆ ವಿಶೇಷ ಪೂಜೆ, ಚಿನ್ನದ ತೇರು, ಬೆಳ್ಳಿ ತೇರು, ಹುಲಿವಾಹನ, ರುದ್ರಾಕ್ಷಿವಾಹನ, ಬಸವ ವಾಹನ ಸೇರಿದಂತೆ ಇನ್ನಿತರ ಉತ್ಸವಗಳಲ್ಲಿ ಭಾಗಿಯಾಗಿದ್ದರು. ದೇವರ ದರ್ಶನ ಪಡೆದು ಪೂಜಾ ಕೈಂಕರ್ಯ ಹಾಗೂ ಹರಕೆ ಸೇವೆ ನೆರವೇರಿಸಿದ್ದರು. ಶನಿವಾರ ಬೆಳಗ್ಗೆ ಜರುಗಿದ ಮಹಾ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.
ವಿಜೃಂಭಣೆಯ ಕೊಂಡೋತ್ಸವ: ಕೊಂಡೋತ್ಸವದ ಹಿನ್ನೆಲೆಯಲ್ಲಿ ದೇಗುಲದ ರಾಜಗೋಪುರ ಮುಂಭಾಗದಲ್ಲಿ 12 ಮೊಳ ಉದ್ದದ ಕೊಂಡವನ್ನು ನಿರ್ಮಿಸಿ ಸುತ್ತಲು ತಳಿರು, ತೋರಣದಿಂದ ಸಿಂಗಾರ ಮಾಡಲಾಗಿತ್ತು. ರಾತ್ರಿ 8ರ ವೇಳೆಯಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಬೇಡಗಂಪಣ ಅರ್ಚಕರಿಂದ ಸ್ವಾಮಿಗೆ ಸಂಕಲ್ಪಾದಿ ಪೂಜೆ ಹಾಗೂ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಸಹಸ್ರನಾಮ ಬಿಲ್ವಾರ್ಚನೆ, ದೀವಟಿಗೆ ಸೇವೆ, ಧೂಪದಾರತಿ ಹಾಗೂ ಮಹಾ ಮಂಗಳಾರತಿಯನ್ನು ಬೆಳಗಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಬೆಳಗ್ಗೆಯಿಂದಲೇ ಉಪವಾಸವಿದ್ದ 12 ಮಂದಿ ಬೇಡಗಂಪಣ ಅರ್ಚಕರು ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ವಾಮಿಗೆ ಪೂಜೆ ಸಲ್ಲಿಸಿದರಲ್ಲದೆ, ಮಂಗಳವಾದ್ಯದೊಂದಿಗೆ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ ಹಾಗೂ ದೀವಟಿಗೆ ಸೇವೆ ನೆರವೇರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.
ಬಳಿಕ ದೇಗುಲದಲ್ಲಿ 3ನೇ ಅಭಿಷೇಕದ ಪೂಜೆಯ ಬಳಿಕ ಸತ್ತಿಗೆ, ಸೂರಿಪಾನಿ, ನಂದಿಕಂಬ, ಶಂಖ, ಜಾಗಟೆ ಹಾಗೂ ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ತಂಬಡಗೇರಿಗೆ ತೆರಳಿದ ಅರ್ಚಕರು ಮಾದಪ್ಪನು ಊಟ ಸವಿದ ದುಂಡಮ್ಮನ ಮನೆಯಲ್ಲಿನ ಲಿಂಗ ಹಾಗೂ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಡಾವಣೆಯಲ್ಲಿ ಮೆರವಣಿಗೆ ನಡೆಸಿ ಕೊಂಡದ ಬಳಿ ಆಗಮಿಸಿ ಅರ್ಚಕರು ಕಾಶಿ ವಸ್ತ್ರಧಾರಿಗಳಾಗಿ ಹಣೆಗೆ ವಿಭೂತಿ, ಕೈಯಲ್ಲಿ ಖಡ್ಗ ಹಾಗೂ ಹೊಟ್ಟೆಗೆ ವೀರಭದ್ರಸ್ವಾಮಿಯ ಬೆಳ್ಳಿಯ ಪಟ್ಟಿಯನ್ನು ಕಟ್ಟಿಕೊಂಡು ಕೊಂಡದ ಸುತ್ತ ಪ್ರದಕ್ಷಿಣೆ ಹಾಕಿದರು. 8 ದಿಕ್ಕುಗಳಿಗೂ ಬಲಿ ಅನ್ನವನ್ನು ಸಮರ್ಪಿಸಿ ಬೂದು ಕುಂಬಳಕಾಯಿ ಒಡೆದು ವೀರಾವೇಶದ ಕುಣಿತದೊಂದಿಗೆ ಭಕ್ತಿ ಭಾವದಿಂದ ಕೊಂಡವನ್ನು ಹಾಯ್ದರು. ನಂತರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊಂಡೋತ್ಸವದ ವೇಳೆ ನೆರೆದಿದ್ದ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂದು ಜೈಕಾರ ಹಾಕುವ ಮೂಲಕ ಕೊಂಡವನ್ನು ಹಾಯುವ ಅರ್ಚಕರಲ್ಲಿ ಉತ್ಸಾಹ ಮೂಡಿಸಿದರು.
ಈ ಸಂದರ್ಭದಲ್ಲಿ ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಅರ್ಚಕರು, ಪ್ರಾಧಿಕಾರದ ನೌಕರರು ಹಾಗೂ ದೇಗುಲದ ಸಿಬ್ಬಂದಿ ಇದ್ದರು.