ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯ ಶೇಷಣ್ಣ ಒಡೆಯರ ಗದ್ದುಗೆ ಬಳಿ ಹಾಗೂ ದೇಗುಲದ ಸಮೀಪದ ಬಲಮುರಿ ಗಣಪತಿ ಮಂಟಪದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ದಾರ ಹಾಗೂ ಮಣಿ ಸರಗಳನ್ನು ಭಾನುವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವಶಕ್ಕೆ ಪಡೆದರು.
ಈ 2 ಮಂಟಪಗಳಲ್ಲೂ ಪೂಜೆ ಸಲ್ಲಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಅರ್ಚಕರು ದಾರ ಹಾಗೂ ಮಣಿ ಸರಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಭಕ್ತರು ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರು ಅಗತ್ಯ ಕ್ರಮವಹಿಸಿ ದಾರ ಹಾಗೂ ಮಣಿ ಸರಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುವಂತೆ ಸಿಬ್ಬಂದಿಗೆ ಆದೇಶಿಸಿದ್ದರು. ಈ ಹಿನ್ನೆಲೆ ಸ್ಥಳಕ್ಕೆ ತೆರಳಿದ ಸಿಬ್ಬಂದಿ ತಂಡ ದಾರ ಹಾಗೂ ಮಣಿ ಸರಗಳನ್ನು ವಶಕ್ಕೆ ಪಡೆದು ಅಲ್ಲಿನ ಅರ್ಚಕರಿಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು.