ಜಿಲ್ಲೆ

ಮ.ಬೆಟ್ಟದ ಮಾರ್ಗದಲ್ಲಿ ಕಾಡಾನೆ ದರ್ಶನ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾರ್ಗದ ಅಲ್ಲಲ್ಲಿ ಕಳೆದ 4-5 ತಿಂಗಳಿನಿಂದೀಚೆಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಭಕ್ತರಲ್ಲಿ ಆತಂಕ ಉಂಟು ಮಾಡುತ್ತಿವೆ. ಕಾಡಾನೆಗಳ ಕಡಿವಾಣಕ್ಕೆ ಒತ್ತಾಯ ಕೇಳಿ ಬಂದಿದೆ.

ರಾಜ್ಯದಲ್ಲಿಯೇ ಹೆಚ್ಚು ಆದಾಯ ಗಳಿಸುವ ದೇಗುಲಗಳಲ್ಲಿ ಮ.ಬೆಟ್ಟದ ಮಾದಪ್ಪನ ದೇಗುಲವು ಒಂದು. ಇಲ್ಲಿಗೆ ಮಹಾ ಶಿವರಾತ್ರಿ, ಯುಗಾದಿ, ದೀಪಾವಳಿ, ಮಹಾಲಯ ಅಮಾವಾಸ್ಯೆ ಹಾಗೂ ಇನ್ನಿತರ ಜಾತ್ರಾ ಮಹೋತ್ಸವದ ಸಂದರ್ಭ ಬೆಂಗಳೂರು, ಮೈಸೂರು, ಚಾ.ನಗರ, ಮಂಡ್ಯ, ರಾಮನಗರ ಹಾಗೂ ಇನ್ನಿತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಹಾಗೂ ಪ್ರತಿ ತಿಂಗಳ ಅಮಾವಾಸ್ಯೆಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಾಹನಗಳ ಮೂಲಕ ಹನೂರು ಮಾರ್ಗವಾಗಿ ತೆರಳುತ್ತಾರೆ. ಜತೆಗೆ ಇತ್ತೀಚೆಗೆ ಆಗಾಗ್ಗೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ಆನೆ, ಜಿಂಕೆ ಹಾಗೂ ಇನ್ನಿತರ ಪ್ರಾಣಿಗಳು ವಾಸವಾಗಿವೆ. ಹಿಂದೆ ಈ ಮಾರ್ಗದ ರಸ್ತೆಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಭಕ್ತರು ಯಾವುದೇ ಅಳುಕಲ್ಲದೆ ಮ.ಬೆಟ್ಟಕ್ಕೆ ನಿರಾಳವಾಗಿ ತೆರಳುತ್ತಿದ್ದರು. ಆದರೆ ಕಳೆದ 4-5 ತಿಂಗಳಿನಿಂದೀಚೆಗೆ ಕಾಡಾನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ಭಕ್ತರು ಆತಂಕಕ್ಕೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೆಜ್ಜೆ ಗುರುತು:

ಮ.ಬೆಟ್ಟ ಮಾರ್ಗದಲ್ಲಿ ಈ ಹಿಂದೆ ಬೇಸಿಗೆ ವೇಳೆಯೂ ಅರಣ್ಯ ಪ್ರದೇಶದಲ್ಲಿ ಮೇವು ಹಾಗೂ ನೀರಿನ ಸಮಸ್ಯೆ ಇದ್ದರೂ ಕಾಡಾನೆಗಳು ರಸ್ತೆ ಬದಿಗೆ ಆಗಮಿಸುತ್ತಿರಲಿಲ್ಲ. ಆದರೆ ಇದೀಗ ಆಗಾಗ್ಗೆ ಮಳೆಯಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೂ 4-5 ತಿಂಗಳಿನಿಂದ ಆಗಾಗ್ಗೆ ಕಾಡಾನೆಗಳು ರಸ್ತೆ ದಾಟುವುದು, ಬದಿಯಲ್ಲಿ ನಿಲ್ಲುತ್ತಿರುವುದು ಹೆಚ್ಚಾಗುತ್ತಿದೆ.

ಜ.10ರಂದು ಈ ಮಾರ್ಗದ ಎಲ್ಲೇಮಾಳ ನರ್ಸರಿ ಬಳಿ, ಜ.31 ರಂದು ಕೋಣನಕೆರೆ ಸಮೀಪ, ಫೆ.4 ರಂದು ಹನೂರು ಎಲ್ಲೇಮಾಳ ಮಾರ್ಗ, ಏ.2 ಹಾಗೂ 15 ರಂದು ಕೌದಳ್ಳಿ ಸಮೀಪದ ಸಂತೇಖಾನೆ ಹಳ್ಳದ ಬಳಿ, ಮೇ 2 ರಂದು ಎಲ್ಲೇಮಾಳ ಸಮೀಪದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬಳಿ, ಮೇ 13 ರಂದು ತಾಳುಬೆಟ್ಟದ 3ನೇ ತಿರುವು ಹಾಗೂ ಮೇ 30ರಂದು ತಾಳುಬೆಟ್ಟ ಮ.ಬೆಟ್ಟ ಮಾರ್ಗದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಭಕ್ತರನ್ನು ಆತಂಕಕ್ಕೀಡು ಮಾಡಿವೆ. ಇನ್ನು ಜ.28 ಹಾಗೂ ಫೆ. 13ರಂದು ಮ.ಬೆಟ್ಟ - ಪಾಲಾರ್ ಮಾರ್ಗದಲ್ಲಿ, ಮೇ 13ರಂದು ಮ.ಬೆಟ್ಟಕ್ಕೆ ಕಾವೇರಿ ನೀರು ಸರಬರಾಗುವ ಪಂಪ್‌ಹೌಸ್ ಬಳಿ, ಮೇ 24ರಂದು ಮ.ಬೆಟ್ಟದ ಜನತಾ ಕಾಲನಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಹೆಜ್ಜೆ ಗುರುತುಗಳಾಗಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮ.ಬೆಟ್ಟದ ಮಾರ್ಗದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಕಾಡಾನೆಗಳ ಚಲನವಲನವನ್ನು ಕೆಲ ಭಕ್ತರು ಕುತೂಹಲದಿಂದ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಇನ್ನು ಕೆಲವು ಭಕ್ತರು ಗಾಬರಿಗೊಂಡು ಆತಂಕಕ್ಕೆ ಒಳಗಾಗಿದ್ದಾರೆ. ಈ ವೇಳೆ ಕಾಡಾನೆಗಳ ದೃಶ್ಯವನ್ನು ಭಕ್ತರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಕಾಡಾನೆಗಳು ರಸ್ತೆಗೆ ಬಾರದಂತೆ ಒತ್ತಾಯಿಸಿದ್ದಾರೆ.

ಫಸಲು ನಾಶ:

ತಾಲೂಕು ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದ್ದು, ರೈತರು ರೋಸಿ ಹೋಗಿದ್ದಾರೆ. ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ರೈತ ಸಂಘಟನೆಗಳು ಹಲವು ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಪ್ರತಿಭಟನೆ ಸಹ ನಡೆಸಿದ್ದಾರೆ. ಆದರೆ ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಇಡುತ್ತಲೇ ಇದ್ದು, ಫಸಲು ನಾಶವಾಗುತ್ತಲೇ ಇದೆ. ಜತೆಗೆ ಕೊಪ್ಪ ಗ್ರಾಮದಲ್ಲಿ ಮುನಿಸ್ವಾಮಿ, ಚಿಕ್ಕಲತ್ತೂರಿನಲ್ಲಿ ಮಾದಪ್ಪ ಹಾಗೂ ಕೊರಮನಕತ್ತರಿ ಗ್ರಾಮದಲ್ಲಿ ರೈತ ನಂಜಪ್ಪ ಅವರು ಆನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಆದರೆ ಕಾಡಾನೆಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಇದರಿಂದ ಸಾವು ನೋವು ಸಂಭವಿಸುತ್ತಲೇ ಇದೆ. ಇತ್ತ ಇದೀಗ ಮ.ಬೆಟ್ಟದ ಮಾರ್ಗದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗುತ್ತಿದೆ. ಜತೆಗೆ ಹನೂರಿನಿಂದ ಅಜ್ಜೀಪುರಕ್ಕೆ ತೆರಳುವ ಅರಕನಹಳ್ಳದ ಬಳಿಯೂ ಆಗಾಗ್ಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಲೇ ಇದೆ. ಇದರಿಂದ ತಾಲೂಕಿನಲ್ಲಿ ಕಾಡಾನೆಗಳ್ದದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿಗೆ ಬಿಗಿ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸ.

ರಸ್ತೆಗೆ ಬಾರದಂತೆ ತಡೆಗಟ್ಟಿ ಇತ್ತೀಚಿನ ದಿನಗಳಲ್ಲಿ ಮ.ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ ವಾಹನ ಹಾಗೂ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಈ ಮಾರ್ಗದಲ್ಲಿ ಕಾಡಾನೆಗಳು ರಸ್ತೆಯಲ್ಲಿ ಕಾಣಿಸಿಕೊಂಡು ಭಕ್ತರನ್ನು ಬೆಚ್ಚಿ ಬೀಳಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇಂತಹ ಸನ್ನಿವೇಶಗಳು ಹೆಚ್ಚಾದರೆ ಭಕ್ತರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕಾಡಾನೆಗಳು ರಸ್ತೆಗೆ ಬಾರದಂತೆ ಸೂಕ್ತ ಕ್ರಮಕೈಗೊಳ್ಳುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಭಕ್ತರು ಹಾಗೂ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.

ನಾನು ಫೆ.30ರಂದು ರಾತ್ರಿ 9ರ ವೇಳೆಯಲ್ಲಿ ಸ್ನೇಹಿತರ ಜತೆ ಕಾರಿನಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದೆವು. ಈ ವೇಳೆ ತಾಳುಬೆಟ್ಟದ ಮಾರ್ಗದಲ್ಲಿ ಕಾಡಾನೆಯೊಂದು ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲೇ ನಿಂತಿತ್ತು. ಇದರಿಂದ ವಾಹನ ಚಲಿಸಲು ಸಾಧ್ಯವಾಗದೇ ಕಾದು ನಿಲ್ಲುವಂತಾಯಿತು. ಕೆಲವು ಭಕ್ತರು ಆತಂಕಕ್ಕೆ ಒಳಗಾದರು. ಇದರಿಂದ ತೊಂದರೆ ಅನುಭವಿಸುವಂತಾಯಿತು. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಡಾನೆ ರಸ್ತೆಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿನೋದ್ ಕುಮಾರ್, ಕಾರ್ಯದರ್ಶಿ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಹನೂರು