????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ಸೌಲಭ್ಯಕ್ಕೆ ಆಗ್ರಹ

ಹನೂರು : ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರದಿಂದ 5 ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಗೆ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಒದಗಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.

ಮ.ಬೆಟ್ಟದಲ್ಲಿ ಅ.29 ರಂದು ಮಾದಪ್ಪನ ಸನ್ನಿಧಿಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ನೆವೇರಿಸುವುದರ ಮೂಲಕ ದೀಪಾವಳಿ ಜಾತ್ರೆ ಆರಂಭವಾಗಲಿದ್ದು, 30 ರಂದು ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿವಿಧ ಉತ್ಸವಗಳು, 31ರಂದು ನರಕ ಚತುರ್ದಶಿ ಪ್ರಯುಕ್ತ ವಿಶೇಷ ಉತ್ಸವಗಳು ಜರುಗಲಿವೆ. ನ.1ರಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಹಾಲರುವೆ ಉತ್ಸವ, 2 ರಂದು ಬೆಳಗ್ಗೆ 7.50 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವವು ಜರುಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಹಾಗಾಗಿ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸಾರಿಗೆ ಇಲಾಖೆ ಪ್ರತಿನಿತ್ಯ ಸಂಚರಿಸುವ 106 ಬಸ್‌ಗಳ ಜತೆಗೆ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ಇನ್ನಿತರ ಕಡೆಗಳಿಂದ ಮ.ಬೆಟ್ಟಕ್ಕೆ 300 ಹೆಚ್ಚುವರಿ ಬಸ್‌ಗಳನ್ನು ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ತಾಲೂಕು ಕೇಂದ್ರವಾದ ಹನೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿದ್ದರೂ ಈವರೆಗೂ ಇಲ್ಲಿಂದ ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಿಲ್ಲ.

ಈ ಜಾತ್ರೆಗೆ ಹನೂರು ಸೇರಿದಂತೆ ಒಡೆಯರಪಾಳ್ಯ, ಪಿ.ಜಿ. ಪಾಳ್ಯ, ಶಾಗ್ಯ ಹಾಗೂ ಭಾಗದ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ತೆರಳುತ್ತಾರೆ. ಆದರೆ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯವಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ನಿಂತು ಕೊಳ್ಳೇಗಾಲದಿಂದ ಆಗಮಿಸುವ ಬಸ್‌ನಲ್ಲಿ ನೂಕುನುಗ್ಗಲಿನಲ್ಲೇ ನಿಂತುಕೊಂಡೇ ಈ ಭಾಗದ ಭಕ್ತರು ಪ್ರಯಾಣಿಸಬೇಕಿದೆ. ಕೆಲ ಭಕ್ತರು ಖಾಸಗಿ ಬಸ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಭಕ್ತರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ತೊಂದರೆ ಅನುಭವಿಸುವಂತಾಗಿದೆ.

ಮ.ಬೆಟ್ಟದಲ್ಲಿ ನಡೆಯುವ ವಿವಿಧ ಜಾತ್ರಾ ಮಹೋತ್ಸವದ ವೇಳೆ ಹನೂರು ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಾರೆ. ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಮ.ಬೆಟ್ಟಕ್ಕೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ ದೈವ ಮಾದಪ್ಪನನ್ನು ಪೂಜಿಸುವ ಭಕ್ತರಿಗೆ ಮಾತ್ರ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಇಲ್ಲ. ಆದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಹನೂರಿನಿಂದ ಪ್ರತ್ಯೇಕ ಬಸ್ ಸೌಕರ್ಯ ಕಲ್ಪಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.