ಬೀದರ್: ಭ್ರೂಣ ಹತ್ಯೆ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದು ಪ್ರತಿಯೊಬ್ಬರಿಗೆ ಮನದಟ್ಟು ಮಾಡುವ ಮೂಲಕ ಪ್ರತಿ ಹೆಣ್ಣು ಮಗುವಿನ ಜೀವ ಉಳಿಸುವ ಕಾರ್ಯ ಮಾಡೋಣ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಕೆಲವರು ಅನುಮತಿ ಇಲ್ಲದೆ ಸ್ಕ್ಯಾನಿಂಗ್ ಸೆಂಟರ್ ನಡೆಸುವ ಸಾಧ್ಯತೆ ಇರುತ್ತವೆ. ಇದನ್ನು ಗಮನಿಸಬೇಕು. ಇಂಥ ಕಡೆಗಳಲ್ಲಿಯೇ ಭ್ರೂಣ ಪತ್ತೆ ನಡೆಯುತ್ತವೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಈಗಿರುವ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಮಾನ್ಯತೆ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಪಿಸಿ ಆ್ಯಂಡ್ ಪಿಎನ್ ಡಿಟಿ ಕಾಯ್ದೆ ಅನುಸಾರ ಅವು ಕಾರ್ಯನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಕಡ್ಡಾಯ ನೋಂದಣಿ ಪ್ರಮಾಣಪತ್ರ ಮತ್ತು ಅವುಗಳು ಪಡೆದುಕೊಂಡಿರುವ ಲೈಸೆನ್ಸ್ ಪತ್ರ ಎರಡನ್ನೂ ಎಲ್ಲರೂ ನೋಡುವ ಜಾಗದಲ್ಲಿ ಕಾಣುವಂತೆ ಅಳವಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ ಮಾತನಾಡಿ, ಜಿಲ್ಲೆಯ ಔರಾದ್ ನಲ್ಲಿ 2, ಬಸವಕಲ್ಯಾಣ 13, ಭಾಲ್ಕಿ 8, ಬೀದರ್ 40, ಚಿಟಗುಪ್ಪ 1, ಹುಮನಾಬಾದ್ನಲ್ಲಿ 6 ಮತ್ತು ಗ್ರಾಮೀಣ ಪ್ರದೇಶದಲ್ಲಿ 1 ಸೇರಿ ಒಟ್ಟು 70 ಸ್ಕ್ಯಾನಿಂಗ್ ಸೆಂಟರ್ ಗಳು ಇವೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ನಗರಸಭೆ ಆಯುಕ್ತ ರವೀಂದ್ರ ಅಂಗಡಿ, ಡಿಎಚ್ಒ ಡಾ.ವಿ.ಜಿ. ರೆಡ್ಡಿ, ಡಿವೈಎಸ್ಪಿ ಬಸವೇಶ್ವರ ಹೀರಾ, ತಹಸೀಲ್ದಾರ್ ಗಂಗಾದೇವಿ ಇದ್ದರು.
ಹೆಣ್ಣು ಹುಟ್ಟಿದರೆ ಸಂಭ್ರಮಿಸಿ
ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿದೆ. ನಾನು ಮತ್ತು ಸಿಇಒ ಅವರು ಸೇರಿ ಪ್ರತಿ ತಿಂಗಳು ಒಂದು ದಿನ ಅನಿರೀಕ್ಷಿತ ಸ್ಕ್ಯಾನಿಂಗ್ ಸೆಂಟರ್ ಭೇಟಿ ಮಾಡುವುದಾಗಿ ಡಿಸಿ ರಾಮಚಂದ್ರನ್ ಹೇಳಿದರು. ಸಾಕಷ್ಟು ಓದಿದವರು, ಬುದ್ಧಿವಂತರೆನಿಸಿಕೊಂಡ ಬಹಳಷ್ಟು ಜನರೇ ಹೆಣ್ಣು ಮಗು ಜನಿಸಿದರೆ ಸಂತಸಪಡುವುದಿಲ್ಲ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ಇಂಥ ಮನಸ್ಥಿತಿ ಮೊದಲು ತೊಲಗಬೇಕು. ಹೆಣ್ಣು ಮಗು ಜನಿಸಿದರೆ ಆ ದಿನ ಮಗು ಮತ್ತು ತಾಯಿಗೆ ಗೌರವಿಸುವ ಮನೋಭಾವ ನಮ್ಮಲ್ಲಿ ಬಂದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿದೆ ಎಂದರು.