ಚನ್ನರಾಯಪಟ್ಟಣ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭ್ರೂಣ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಅಂಚೆ ಇಲಾಖೆ ಹಾಸನ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸುಕನ್ಯಾ ಸಮೃದ್ಧಿ ಮಹೋತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳು ಮನೆಯ ಬೆಳಕು ಎಂದರು.
ಗಂಡು ಮಗುವಿನ ಹುಟ್ಟಿಗೆ ಪ್ರಾಮುಖ್ಯತೆ ನೀಡುವ ಬರದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಸರಿಯಲ್ಲ. ತಾಯಿ, ಅಕ್ಕ-ತಂಗಿ, ಸ್ನೇಹಿತೆ ಹಾಗೂ ಸಂಗಾತಿ ಸ್ಥಾನದಲ್ಲಿ ನಿಂತು ಕೈಹಿಡಿದು ಬದುಕು ಮುನ್ನಡೆಸುವ ಶಕ್ತಿ ರೂಪ ಹೆಣ್ಣು. ಹೆಣ್ಣಿನ ಸಂತಾನ ಉಳಿದು ಬೆಳೆಯಬೇಕು ಎಂದು ತಿಳಿಸಿದರು.
ಭ್ರೂಣ ಹತ್ಯೆ ಕೃತ್ಯವು ಮಹಾ ಪಾಪವಾಗಿದ್ದು ಜತೆಗೆ ಗಂಡು-ಹೆಣ್ಣು ಅನುಪಾತದಲ್ಲಿ ಏರು-ಪೇರು ಉಂಟಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮದುವೆ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಭ್ರೂಣ ಪತ್ತೆ ಮಾಡುವವರಿಗೆ ಹಾಗೂ ಹತ್ಯೆಗೆ ಮುಂದಾಗುವವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಶ್ ಮಾತನಾಡಿ, ಹೆಣ್ಣು ಮಕ್ಕಳ ಭವಿಷ್ಯದ ಪ್ರಗತಿ ಸಲುವಾಗಿ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ರೂಪಿಸಿದ್ದು ಇದರಿಂದ ಸಾಕಷ್ಟು ಸೌಲಭ್ಯಗಳು ಲಾಭದಾಯಕವಾಗಿ ಸಿಗಲಿವೆ ಎಂದರು.
ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿದ್ದಲ್ಲಿ 18 ವರ್ಷದ ವರಗೆ ವಿದ್ಯಾಭ್ಯಾಸಕ್ಕೆ ಶೇ.50 ರಷ್ಟು ಹಾಗೂ ನಂತರ ಮದುವೆ ವೇಳೆಗೆ ಉಳಿದ ಹಣ ಸಿಗಲಿದ್ದು ಪಾಲಕರಿಗೆ ಹೆಣ್ಣು ಮಕ್ಕಳ ಮೇಲಿನ ಭವಿಷ್ಯದ ಹೊರೆ ಹಾಗೂ ಆರ್ಥಿಕ ಜವಾಬ್ದಾರಿ ಕಡಿಮೆಯಾಗಲಿದೆ. ಇದು ಕೇಂದ್ರ ಸರ್ಕಾರದ ಮಹತ್ಕಾಂಕ್ಷಿ ಯೋಜನೆ ಎಂದು ತಿಳಿಸಿದರು.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಇದೂವರಗೆ 63 ಸಾವಿರ ಖಾತೆ ತೆರೆದಿದ್ದು 201 ಕೋಟಿ ರೂ. ಹಣವನ್ನು ಯೋಜನೆಯಡಿ ತೊಡಗಿಸಲಾಗಿದೆ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ದೇಶದ 75 ನಗರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸುಕನ್ಯಾ ಸಮೃದ್ಧಿ ಯೋಜನೆ ಹೊಂದಿರುವ ಮಕ್ಕಳಿಗೆ ಪಾಸು ಪುಸ್ತಕಗಳನ್ನು ವಿತರಿಸಲಾಯಿತು. ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ತಾಪಂ ಇಒ ಡಿ.ಬಿ. ಸುನೀಲ್ ಕುಮಾರ್, ಹಾಸನ ವಿಭಾಗದ ಅಂಚೆ ಅಧೀಕ್ಷಕ ಎನ್.ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರಮೂರ್ತಿ, ತಾಲೂಕು ವ್ಯಾಪ್ತಿ ಅಂಚೆ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.