ಬಾಗಲಕೋಟೆ: ಮಹಾಲಿಂಗಪೂರದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಮತ್ತು ಗರ್ಭಿಣಿ ಮಹಿಳೆ ಮರಣ ಪ್ರಕರಣ ಮರುಕಳಿಸದಂತೆ ಜಿಲ್ಲಾ ಮಟ್ಟದ ಹಾಗೂ ಉಪವಿಭಾಗ ಮಟ್ಟದ ಸಮಿತಿಗಳೊಂದಿಗೆ ಸಮನ್ವಯ ಮಾಡಿಕೊಂಡು ಭ್ರೂಣ ಹತ್ಯೆ ಪ್ರಕರಣಗಳನ್ನು ಪತ್ತೆ ಹಚ್ಚಲು ಕ್ಷೀಪ್ರ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಕಂದಾಯ ಇಲಾಖೆ, ಪೊಲೀಸ್, ಆರೋಗ್ಯ ಮತ್ತು ನಗರಾಭಿವೃದ್ದಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಪಿಸಿ & ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ತಂಡ ನಿರ್ವಹನಿಸಬೇಕಾದ ಕರ್ತವ್ಯಗಳನ್ನು ತಿಳಿಸಲಾಗಿದೆ. ಕಾಲಕಾಲಕ್ಕೆ ಸ್ಕ್ಯಾನಿಂಗ್ ಸೆಂಟರಗಳ ತಪಾಸಣೆ ನಡೆಸುವುದು, ನ್ಯೂನತೆ ಕಂಡುಬಂದಲ್ಲಿ ನಿಯಮಿತ ಸಮಯದೊಳಗೆ ಕಾಯ್ದೆಯನುಸಾರ ಕ್ರಮಕೈಗೊಳ್ಳಲು ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ತಿಳಿಸಲಾಗಿದೆ.
ಭ್ರೂಣ ಹತ್ಯೆ ಮತ್ತು ಪತ್ತೆಯಂತಹ ಕಾನೂನು ಬಾಹಿತ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಕಾಯ್ದೆಯನುಸಾರ ಕ್ರಮಕೈಗೊಳ್ಳಲು ತಿಳಿಸಲಾಗಿದ್ದು, ಸ್ಕ್ಯಾನಿಂಗ್ ಸೆಂಟರಗಳ ವಿರುದ್ದ ನ್ಯಾಯಾಲಯದಲ್ಲಿ ತ್ವರಿತಗತಿಯಾಗಿ ಪ್ರಕರಣ ದಾಖಲಿಸುವುದು, ರಾಜ್ಯ ಸಕ್ಷಮ ಪ್ರಾಧಿಕಾರದ ಪತ್ರದನ್ವಯ ಗುಪ್ತಕಾರ್ಯಾಚರಣೆ ಕಡ್ಡಾಯವಾಗಿ ನಡೆಸಲಾಗುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ, ಗುಪ್ತ ಕಾರ್ಯಾಚರಣೆಯನ್ನು ನಡೆಸಲು ಸಹಾಯ ಮಾಡಲಾಗುತ್ತದೆ. ಜಿಲ್ಲೆಗಳಲ್ಲಿರುವ ಪ್ರತಿಯೊಂದು ಜನಟಿಕ್ ಕೌನ್ಸಲಿಂಗ್ ಕೇಂದ್ರಗಳನ್ನು ಜನಟಿಕ್ ಲ್ಯಾಬಗಳು, ಜನಟಿಲ್ ಕ್ಲಿನಿಕ್‍ಗಳು, ಅಲ್ಟ್ರಾಸೌಂಡ ಕೇಂದ್ರಗಳು ಇತ್ಯಾದಿಗಳ ಮೇಲೆ ದಾಳಿ ನಡೆಸಿ ಅಗತ್ಯ ಕಾನೂನು ಕ್ರಮ ಜರುಗಿಸಲು ನಿರ್ದೇಶಕ ನೀಡಲಾಗಿದೆ.
ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳಗಳಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ಉತ್ತರಗಳನ್ನು ಪರಿಶೀಲಿಸಲಾಗಿ ಅದರಲ್ಲಿ ಕರ್ತವ್ಯ ನಿರ್ಲಕ್ಷ ತೋರಿದ ಆರೋಪದ ಮೇಲೇ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ ಅವರನ್ನು ಅಮಾನತ್ತುಗೊಳಿಸುವಂತೆ ಹಾಗೂ ತಾಲೂಕಿನ ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಗಾಣ ಇವರ ವಿರುದ್ದ ಇಲಾಖಾ ವಿಚಾರಣೆ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಅವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ತಿಳಿಸಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ಹಚ್ಚುವ ತಂತ್ರಗಳು ಕಾಯ್ದೆ 1994 ಮತ್ತು ನಿಯಮಗಳು 1996. ಇವುಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಮಟ್ಟದ ಜಿಲ್ಲಾ ಸಕ್ಷಮ ಪ್ರಾಧಿಕಾರಿಗಳನ್ನಾಗಿ ಮಾಡಿ ಸರಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೇ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಹಚ್ಚುವ ತಂತ್ರಗಳು ಕಾಯ್ದೆ 1994ರ ಸೆಕ್ಷನ 17(3)(ಬಿ) ರಲ್ಲಿ ನೀಡಲ್ಪಟ್ಟಿರುವ ಅಧಿಕಾರವನ್ನು ಚಲಾಯಿಸಿ ಉಪ ವಿಭಾಗಾಧಿಕಾರಿಗಳನ್ನು ಅವರ ಉಪ ವಿಭಾಗಗಳಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಹೆಣ್ಣು ಭ್ರೂಣಹತ್ಯೆಗೆ ಸಂಬಂಧಿಸಿದಂತೆ ದೂರುಗಳು ಇದ್ದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ.