ಮುದ್ದೇಬಿಹಾಳ ಪಟ್ಟಣದ ತಾಲೂಕಾಡಳಿತ ಸೌಧದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವದಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ಬಿ.ಎಸ್. ಸೆಂಟ್ರಲ್ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಶಾಸಕ ಸಿ.ಎಸ್. ನಾಡಗೌಡ ವಿತರಿಸಿದರು. ತಹಸೀಲ್ದಾರ್ ರೇಖಾ ಟಿ., ಇತರರಿದ್ದರು. 
ಜಿಲ್ಲೆ

ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರ ನಿರ್ಮೂಲನೆ ಆದೀತೆ

Vijayapura - Desk - Parashuram Keri

ಮುದ್ದೇಬಿಹಾಳ: ಭ್ರಷ್ಟಾಚಾರ ನಿರ್ಮೂಲನೆ ಮಾಡುವವರೇ ಭ್ರಷ್ಟಾಚಾರ ಮಾಡಿದರೆ ನಿರ್ಮೂಲನೆ ಆಗುತ್ತದೆಯೇ. ಜನರು ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಕೊಡಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ತಾಲೂಕಾ ಆಡಳಿತದಸೌಧದ ಆವರಣದಲ್ಲಿ ಸ್ವಾತಂತ್ರೊೃೀತ್ಸವದಲ್ಲಿ ಅವರು ಮಾತನಾಡಿ, ಇವತ್ತು ಶಾಸಕರು, ಪಂಚಾಯಿತಿ, ಪುರಸಭೆ, ಸದಸ್ಯರು, ಸಂಸದರು ಮಾರಾಟವಾಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಭ್ರಷ್ಟಾಚಾರಿಗಳನ್ನು ಒಳಗೆ ಹಾಕುತ್ತೇನೆ. ಬಡವರ ಅಕೌಂಟಿಗೆ ದುಡ್ಡನ್ನು ಹಾಕುತ್ತೇನೆ ಎಂದು ರಾಜಕಾರಣ ಮಾಡುತ್ತಿದ್ದಾರೆ. ಗಾಂಧೀಜಿ, ಪಟೇಲ್, ಅಂಬೇಡ್ಕರ್ ಕಂಡ ಕನಸಿನ ಸಂಪೂರ್ಣ ಭಾರತ ಆಗಿದೆ ಎಂದು ನಾನು ಒಪ್ಪುವುದಿಲ್ಲ. ನಮ್ಮಲ್ಲಿರುವ ಲೋಪಗಳನ್ನು ತಿದ್ದಿಕೊಳ್ಳುವ ಕೆಲಸ ಆಗಬೇಕು. ಮೇಲು ಕೀಳು ಭಾವನೆ ನಿರ್ಮೂಲನೆ ಆಗಿಲ್ಲ. ಭಾರತೀಯರೆಲ್ಲ ಒಂದು ಎನ್ನುತ್ತೇವೆ. ಆದರೆ ರಾಜ್ಯ ರಾಜ್ಯಗಳಲ್ಲಿ ಇರುವ ವ್ಯತ್ಯಾಸಗಳನ್ನು ಶಮನ ಮಾಡಲು 77 ವರ್ಷಗಳು ಬೇಕಾ ಎಂಬ ಪ್ರಶ್ನೆ ಮೂಡುತ್ತದೆ. ನದಿ ನೀರಿನ ಹಂಚಿಕೆಯಲ್ಲಿ, ಗಡಿ ವಿಷಯದಲ್ಲಿ ವ್ಯಾಜ್ಯದಲ್ಲಿದ್ದೇವೆ. ಆತ್ಮವಂಚನೆ ಮಾಡಿಕೊಂಡು ದೇಶವನ್ನು ಆಳುವ ಕೆಲಸ ಆಗುತ್ತಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ರೇಖಾ ಟಿ., ಮಾತನಾಡಿ, ಸ್ವಾತಂತ್ರೃವು ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನದಿಂದ ಬಂದಿದೆ ಎಂಬುದನ್ನು ನೆನಪಿಡಬೇಕು. ಬಾಹ್ಯ, ಆಂತರಿಕ ಬೆದರಿಕೆಗಳಿಂದ ದೇಶವನ್ನು ರಕ್ಷಿಸಬೇಕು. ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು ಎಂದರು.

ತಾಪಂ ಇಒ ಸಂಜೀವ ಜನ್ನೂರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಬಿಇಒ ಎಸ್.ಜೆ. ನಾಯಕ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಆರೀಫ ಮುಶಾಪುರಿ, ಮುಖಂಡರಾದ ಎಂ.ಬಿ. ನಾವದಗಿ, ಪ್ರಭು ಕಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಕಟ್ಟೀಮನಿ, ಬಿಆರ್‌ಸಿ ಯು.ಬಿ. ಧರಿಕಾರ, ಟಿ.ಡಿ. ಲಮಾಣಿ, ಸಂಗಮೇಶ ಶಿವಣಗಿ ಇತರರಿದ್ದರು.

ರಾಷ್ಟ್ರ ಧ್ವಜಾರೋಹಣದ ಬಳಿಕ ಪೊಲೀಸ್, ಗೃಹರಕ್ಷಕದಳ, ಸ್ಕೌಟ್ಸ್ ಹಾಗೂ ಗೈಡ್ಸ್, ಎನ್‌ಸಿಸಿ ಕೆಡೆಟ್ಸ್‌ಗಳು ಸೇರಿದಂತೆ ವಿವಿಧ ಪ್ರೌಢಶಾಲೆಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ವಿಬಿಸಿ ಪ್ರೌಢಶಾಲೆ ಪ್ರಥಮ, ಅಂಜುಮನ್ ಪ್ರೌಢಶಾಲೆ ದ್ವಿತೀಯ, ಆಕ್ಸಫರ್ಡ್ ಪ್ರೌಢಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು. ಸಾಂಸ್ಕೃತಿಕ ಪ್ರದರ್ಶನದಲ್ಲಿ ಮಣಿಪುರ ಘಟನೆಯ ಕುರಿತು ಸಂದೇಶದ ನೀಡುವ ಪ್ರದರ್ಶನ ನೀಡಿದ ಬಿ.ಎಸ್. ಸೆಂಟ್ರಲ್ ಶಾಲೆ ಪ್ರಥಮ, ಎಂ.ಜಿ.ಎಂ.ಕೆ ದ್ವಿತೀಯ, ಪ್ರಾರ್ಥನಾ ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡರು. ಬೈಕ್ ವ್ಹಿಲಿಂಗ್ ಹಾಗೂ ಸೆಲ್ಫಿ ಗೀಳಿನಿಂದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವ ಕುರಿತು ಪ್ರಾರ್ಥನಾ ಶಾಲೆಯವರು ನೀಡಿದ ಪ್ರದರ್ಶನ ಗಮನ ಸೆಳೆಯಿತು.