ಚನ್ನರಾಯಪಟ್ಟಣ: ಪೊಲೀಸ್ ನಗರ ಠಾಣೆ ಮತ್ತು ಸಂಚಾರ ಠಾಣೆಯಲ್ಲಿ ಕರ್ತವ್ಯ ದುರುಪಯೋಗ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ, ಪುರಸಭೆ, ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪಟ್ಟಣದ ವೈದ್ಯ ಡಾ.ಸುಬ್ರಹ್ಮಣ್ಯ ಅವರು ತಾಲೂಕು ಕಚೇರಿ ಎದುರು ಗುರುವಾರ ಏಕಾಂಗಿ ಪ್ರತಿಭಟನೆ ನಡೆಸಿದರು.
ಪೊಲೀಸ್ ಇಲಾಖೆಯು ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ, ತಾವು ಕೊಟ್ಟ ದೂರುಗಳನ್ನು ಪರಾಮರ್ಶೆ ಮಾಡದೆ ಕಸದ ಬುಟ್ಟಿಗೆ ಎಸೆಯುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ಕಿಡಿಗೇಡಿಯೊಬ್ಬ ಕಪಾಳಮೋಕ್ಷ ಮಾಡಿದ. ಇದರ ವಿರುದ್ಧ ದೂರು ಕೊಟ್ಟರೂ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಹಣ, ಹೆಂಡ ಹಂಚಿ ಚುನಾವಣೆ ನಡೆಸಿದ ಇತರ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಚುನಾವಣೆ ಅಯೋಗಕ್ಕೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವುದಾಗಿ ಡಾ.ಸುಬ್ರಹ್ಮಣ್ಯ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯು ಅವ್ಯವಸ್ಥೆ, ಸೋಮಾರಿಗಳ ಗೂಡಗಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆಸ್ಪತ್ರೆ ಎಎಂಒ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ, ಸರ್ಕಾರದ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಡಿಎಚ್‌ಒಗೆ ದೂರು ನೀಡಿದರೂ ಕ್ರಮಕ್ಕೆ ಮುಂದಾಗಿಲ್ಲ. ಪುರಸಭೆಯಲ್ಲಿ ಲಂಚವಿಲ್ಲದೇ ಯಾವ ಕೆಲಸವೂ ಆಗದು ಎಂದು ಆರೋಪಿಸಿದರು.