ಮೈಸೂರು: ಭ್ರಷ್ಟಾಚಾರ ಸಮಾಜಕ್ಕೆ ಅಂಟಿದ ಕ್ಯಾನ್ಸರ್ ಆಗಿದ್ದು, ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಅಖಿಲ ಭಾರತ ಹಿರಿಯ ನಾಗರಿಕರ ಒಕ್ಕೂಟದ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಎರಡು ದಿನಗಳ 20ನೇ ರಾಷ್ಟ್ರೀಯ ಹಿರಿಯ ನಾಗರಿಕರ ಸಮ್ಮೇಳನದ ಸಮಾರೋಪದಲ್ಲಿ ಗುರುವಾರ ಅವರು ಮಾತನಾಡಿದರು.
ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದ್ದು, ಅದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಸರ್ಕಾರಿ ನೌಕರರು, ರಾಜಕಾರಣಿಗಳಷ್ಟೇ ಅಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರಿಗಳಿದ್ದಾರೆ. ಹಣದ ಮುಂದೆ ಮಾನವೀಯತೆ, ಸಾಮಾಜಿಕ ಮೌಲ್ಯ ನಗಣ್ಯವಾಗಿವೆ ಎಂದರು.
ರಾಜಕೀಯ ವ್ಯವಸ್ಥೆಯೇ ಭ್ರಷ್ಟಾಚಾರದ ಮೂಲ. ಇದು ಸಡಿಲಗೊಂಡರೆ ಉಳಿದ ಕಡೆಗೂ ಲಂಚಾವತಾರ ವಿಸ್ತರಣೆ ಆಗುತ್ತದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ಕಡಿಮೆಯಾಗಲ್ಲ, ‘ಕಮಿಷನ್’ ಪ್ರಮಾಣದಲ್ಲಿ ಏರಿಳಿತವಾಗಬಹುದಷ್ಟೇ ಎಂದು ಸೂಚ್ಯವಾಗಿ ನುಡಿದರು.
ರಾಜಕೀಯ ವ್ಯವಸ್ಥೆ ಬಹಳಷ್ಟು ತಳಮಟ್ಟಕ್ಕೆ ಕುಸಿದಿದೆ. ವಿಧಾನಸಭೆ-ವಿಧಾನಪರಿಷತ್, ಲೋಕಸಭೆ-ರಾಜ್ಯಸಭೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಬರೀ ಗದ್ದಲ, ಗಲಾಟೆಯಲ್ಲೇ ಸದನದ ಕಲಾಪಗಳು ಕಳೆದುಹೋಗುತ್ತಿವೆ. ಈ ನಡುವೆಯೇ ಯಾವುದೇ ಚರ್ಚೆ ಇಲ್ಲದೆ ಮಸೂದೆಗಳು ಅಂಗೀಕಾರವಾಗಿ ಕಾನೂನುಗಳಾಗಿ ಜನ್ಮ ತಾಳುತ್ತಿವೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮತ್ತು ಜನರಿಗೆ ಮಾರಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಂದು ಹುದ್ದೆಗೂ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ, ಕಾಯ್ದೆ-ಕಾನೂನು, ನೀತಿ-ನಿರ್ಧಾರವನ್ನು ತೆಗೆದುಕೊಳ್ಳುವ ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ವಿದ್ಯಾರ್ಹತೆಯೇ ಇಲ್ಲವಾಗಿದೆ. ಇಡೀ ಜನತಂತ್ರ ವ್ಯವಸ್ಥೆ ಹಾಳಾಗಲು ಇದುವೇ ಕಾರಣವಾಗಿದೆ. ಶಾಸಕ, ಸಂಸದರಿಗೆ ಕನಿಷ್ಠ ವಿದ್ಯಾರ್ಹತೆ ಇರಬೇಕು. ಆಗ ಮಾತ್ರ ಜನಪರ ಕಾಯ್ದೆಗಳು, ಆಡಳಿತ ಜಾರಿ ಆಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಎನ್.ಒಬಯ್ಯ, ಕಾರ್ಯದರ್ಶಿ ಶ್ರೀಹರಿ ಶಿಧಯೆ, ರಾಜ್ಯ ಸಮಿತಿ ಅಧ್ಯಕ್ಷ ಎ.ವೈ.ಬೆಂಡಿಗೇರಿ, ಉಪಾಧ್ಯಕ್ಷ ಮಲ್ಲಪ್ಪ ಮುದರವಿ ಇತರರು ಇದ್ದರು.