ಜಿಲ್ಲೆ

ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಿಸಿ

ಬೀದರ್: ಸಮಾಜಕ್ಕೆ ಇಂದು ದೊಡ್ಡ ಪಿಡುಗಾಗಿ ಕಾಡುತ್ತಿರುವ ಭ್ರಷ್ಟಾಚಾರ ತೊಡಗಿಸಲು ಸಾಹಿತಿಗಳು ಸೇರಿದಂತೆ ಪ್ರತಿಯೊಬ್ಬರೂ ಮುಂದಾಗುವ ಅಗತ್ಯವಿದೆ ಎಂದು ಉಪನ್ಯಾಸಕ, ಸಾಹಿತಿ ಓಂಪ್ರಕಾಶ ದಡ್ಡೆ ಹೇಳಿದರು.

ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಬುಧವಾರ ಆಯೋಜಿಸಲಾಗಿದ್ದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ಯದ ಪರ ಹೋರಾಟಕ್ಕೆ ಗಟ್ಟಿ ಧ್ವನಿ ಬೇಕಾಗಿದೆ. ಸಾಹಿತ್ಯದ ಕೃಷಿಯಲ್ಲೂ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕುವ ಚಿಂತನೆ ನಡೆಯಬೇಕು ಎಂದರು.

ವಿದ್ಯಾರ್ಥಿ ಜೀವನದಿಂದಲೇ ನಾನು ಸಾಹಿತ್ಯ, ಸಂಸ್ಕೃತಿ ಅಭಿರುಚಿ ಬೆಳೆಸಿಕೊಂಡೆ. ದಿ. ಪ್ರೊ.ವೀರೇಂದ್ರ ಸಿಂಪಿ, ಮ.ಮಾ. ಬೋರಾಳಕರ್, ಶ್ರೀಕಾಂತ ಪಾಟೀಲ್, ದೇಶಾಂಶ ಹುಡಗಿ ಮೊದಲಾದ ಸಾಹಿತಿಗಳ ಒಡನಾಟದಿಂದ ನಾನು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಕಾರಣವಾಯಿತು ಎಂದರು.

ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ ಸೂರ್ಯವಂಶಿ ಉದ್ಘಾಟಿಸಿ ಮಾತನಾಡಿ, ತಾಯಿ ನೆಲದ ಋಣ ತೀರಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಯಾವುದೇ ತಾರತಮ್ಯ, ಗುಂಪುಗಾರಿಕೆ ಇಲ್ಲದೆ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ವಾತಾವರಣ ನಿರ್ಮಿಸಿ ಕನ್ನಡಿಗರ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ತಾಲೂಕಾಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ. ದೇಶಪಾಂಡೆ, ಡಾ.ರಘುಶಂಖ ಭಾತಂಬ್ರಾ, ಶಿವಕುಮಾರ ಕಟ್ಟೆ, ಡಾ.ರಾಜಕುಮಾರ ಅಲ್ಲೂರೆ, ಬಾಬುರಾವ ದಾನಿ, ಬಿ.ಜೆ.ವಿಷ್ಣುಕಾಂತ, ರಮೇಶ ಬಿರಾದಾರ, ಡಾ.ಸಂಜೀವಕುಮಾರ ಅತಿವಾಳೆ, ದೇವೇಂದ್ರ ಕರಂಜೆ, ಡಾ.ಬಸವರಾಜ ಬಲ್ಲೂರ, ಜಗನ್ನಾಥ ಕಮಲಾಪುರೆ, ರೇಣುಕಾ ದಡ್ಡೆ, ಕೇಶವ ದಡ್ಡೆ, ಪ್ರೇಮನಾಥ ಪಾಂಚಾಳ ಇತರರಿದ್ದರು. ರುಕ್ಮೊದ್ದಿನ್ ಇಸ್ಲಾಂಪುರ ಸ್ವಾಗತಿಸಿದರು. ಕಲ್ಯಾಣರಾವ ಚಳಕಾಪುರೆ ನಿರೂಪಣೆ ಮಾಡಿದರು. ಟಿ.ಎಂ. ಮಚ್ಚೆ ವಂದಿಸಿದರು.