ಜಿಲ್ಲೆ

ಭ್ರಷ್ಟಾಚಾರ ಮುಕ್ತ ದುರ್ಗಕ್ಕಾಗಿ ನಿರಶನ

ಚಿತ್ರದುರ್ಗ: ಭ್ರಷ್ಟಾಚಾರ ಮುಕ್ತ ಚಿತ್ರದುರ್ಗ ಜಿಲ್ಲೆಯನ್ನಾಗಿಸಲು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಂಗಳವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಇದಕ್ಕೆ ಜಿಲ್ಲೆಯ ಎಲ್ಲರ ಸಹಕಾರ ಅಗತ್ಯವಿದ್ದು, ಕೈಜೋಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಮೂರು ದಿನ ನಿರಶನ ನಡೆಸಲಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, ಜಿಲ್ಲೆಯ ಯಾವ ಸರ್ಕಾರಿ ಕಚೇರಿಗೆ ಹೋದರೂ ಲಂಚವಿಲ್ಲದೆ, ಕೆಲಸವಾಗದು. ಆಸ್ಪತ್ರೆಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಎಲ್ಲೆಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು. ಇದನ್ನು ತಡೆಯುವ ಉದ್ದೇಶಕ್ಕಾಗಿ ಎಎಪಿ ಹೋರಾಟ ನಡೆಸಲಿದೆ ಎಂದರು.

ಸಾಮಾಜಿಕ ನ್ಯಾಯ ಸಮರ್ಪಕವಾಗಿ ಸಿಗುತ್ತಿಲ್ಲ. ಸಂವಿಧಾನವನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ಆದರೆ, ಅದರ ಆಶಯಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸರ್ಕಾರಿ ಸೌಲಭ್ಯ ಪಡೆದವರ ಪಾಲಾಗುತ್ತಿವೆ. ಬಡವರ ಪರವೆಂದು ಆಶ್ವಾಸನೆ ನೀಡಿ, ಅವರ ಏಳ್ಗೆಗೆ ಶ್ರಮಿಸದೆೆ, ಶ್ರೀಮಂತರಿಗೆ ಮನ್ನಣೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜನರನ್ನು ಯಾಮಾರಿಸಲು ಚುನಾಯಿತರು ಮುಂದಾಗಿದ್ದಾರೆ. ಇದರಿಂದ ಹೊರಬಂದು ಹೋರಾಡದ ಹೊರತು ಅರ್ಹರು ತಮ್ಮ ಹಕ್ಕುಗಳನ್ನು ಪಡೆಯಲಾಗದು ಎಂದರು.

ಪದಾಧಿಕಾರಿಗಳಾದ ರಾಮಪ್ಪ, ಜ್ಯೋತಿ ಲಕ್ಷ್ಮೀ, ವಿನೋದಮ್ಮ, ಸೈಯದ್ ತನ್ವೀರ್, ಲೋಕೇಶಪ್ಪ, ಶಿವಮ್ಮ, ಸೈಯದ್ ದಾವೂದ್, ಮಲ್ಲಿಕಾರ್ಜುನಪ್ಪ, ರವಿ, ಲೋಹಿತ್, ಚಂದ್ರಮ್ಮ, ಪರಮೇಶ್ವರಪ್ಪ ಇತರರಿದ್ದರು.