ಜಿಲ್ಲೆ

ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಮುಂದಾಗಿ

ಗೌರಿಬಿದನೂರು: ಭ್ರಷ್ಟಾಚಾರ ನಿರ್ಮೂಲನೆಗಾಗಿ ತಾಲೂಕಿನ ಎಲ್ಲ ಅಧಿಕಾರಿಗಳು ಮುಂದಾಗಬೇಕು ಹಾಗೂ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಆರ್. ಪವಿತ್ರಾ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಬುಧವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಕೇಂದ್ರ ವಿಚಕ್ಷಣ ದಳದಿಂದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಅರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಆಡಚಣೆಯಾಗಿದೆ.ಇದರ ನಿರ್ಮೂಲನೆಗೆ ಆಡಳಿತ ವರ್ಗ ಮತ್ತು ಸಾರ್ವಜನಿಕರು ಮುಂದಾಗಬೇಕಿದೆ ಎಂದರು. ಲಂಚ ತೆಗೆದುಕೊಳ್ಳುವುದು ಮತ್ತು ಕೊಡುವುದು ಅಪರಾಧವಾಗಿದೆ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದರು.

ಸರ್ಕಾರಿ ಸಹಾಯಕ ಅಭಿಯೋಜಕ ಆದಿನಾರಾಯಣಸ್ವಾಮಿ ಮಾತನಾಡಿ, ಭ್ರಷ್ಟಾಚಾರ ದೇಶದ ದೊಡ್ಡ ಪಿಡುಗಾಗಿದೆ.ಇದರ ಕಡಿವಾಣಕ್ಕೆ ಎಲ್ಲರೂ ಮುಂದಾಗಬೇಕಿದೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಪ್ರಾಮಾಣಿಕತೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಉಪತಹಸೀಲ್ದಾರ್ ಆಶಾ, ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಗಂಗಯ್ಯ, ಉಪಾಧ್ಯಕ್ಷ ಎನ್.ಆರ್.ಧನಂಜಯ್, ವಕೀಲರಾದ ವಿ.ಗೋಪಾಲ್, ನಾಗರಾಜು, ಕೆ.ಲಕ್ಷ್ಮೀನಾರಾಯಣ್, ಜಗದೀಶ್, ಆರ್. ರಾಮಚಂದ್ರ, ಕೋಮಲ, ನ್ಯಾಯಾಲಯ ಸಿಬ್ಬಂದಿ ಶ್ರೀನಾಥ್, ಸಂಧ್ಯಾ ಮತ್ತಿತರರಿದ್ದರು.