ಹಾಸನ: ನಗರಸಭೆ ಕುವೆಂಪು ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಆರ್. ಮೋಹನ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿಗಳ ಘಟನೋತ್ತರ ಮಂಜೂರಾತಿ ಕುರಿತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಸಭೆಯ ನಡುವೆಯೇ ‘ಈ ಹಿಂದೆ ನಡೆದ ಸಭೆಯಲ್ಲಿನ ಅನುಮೋದನೆಗಳಿಗೆ ಜೆಡಿಎಸ್ ಸದಸ್ಯರು ಒಪ್ಪಿಗೆ ಸೂಚಿಸಿಲ್ಲ. ಇಂದು ನಡೆಯುವ ವಿಶೇಷ ಸಭೆಯಲ್ಲಿ ನಮ್ಮ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು’ ಎಂಬುದಾಗಿ ನಗರಸಭೆ ಆಯುಕ್ತ ಪರಮೇಶ್ವರಪ್ಪ ಮತ್ತು ಆಯುಕ್ತರಿಗೆ ಹಾಗೂ ಅಧ್ಯಕ್ಷ ಆರ್, ಮೋಹನ ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಕಾಮಗಾರಿಗಳ ಘಟನೋತ್ತರ ಮಂಜೂರಾತಿ ಕುರಿತು ಜೆಡಿಎಸ್‌ನ ಗಿರೀಶ್ ಚನ್ನವೀರಪ್ಪ, ಸಿ.ಆರ್. ಶಂಕರ್, ಕ್ರಾಂತಿ ಮತ್ತಿತರ ಸದಸ್ಯರು ಅಸಮಾಧಾನ ಹೊರಹಾಕಿದರು. ಈ ಹಿಂದೆ ನಡೆದ ಸಭೆಯಲ್ಲಿ ನಮ್ಮ ಅನುಮತಿ ಪಡೆಯದಿದ್ದರೂ ಹಲವು ಕಾಮಗಾರಿಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ಮಾಡಲಾಗಿದೆ. ಘಟನೋತ್ತರ ಮಂಜೂರಾತಿಯನ್ನು ಪಡೆದು ಲಕ್ಷಾಂತರ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಪ್ರೀತಮ್ ಗೌಡ ಮಧ್ಯೆ ಪ್ರವೇಶಿಸಿ, ನಗರಸಭೆ ಆಡಳಿತದಲ್ಲಿ ರಾಜಕೀಯ ಮಾಡಲು ನಾನು ಎಂದಿಗೂ ಆಸ್ಪದ ನೀಡಿಲ್ಲ. ನಗರದ ಪ್ರತಿ ವಾರ್ಡ್‌ನಲ್ಲಿ 5 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಮಾಧಾನ ಪರಿಸಲು ಯತ್ನಿಸಿದರು.
ಆದರೆ ಜೆಡಿಎಸ್‌ನ ಕ್ರಾಂತಿ ಹಾಗೂ ಗಿರೀಶ್ ಚನ್ನವೀರಪ್ಪ ಅವರು, ನಗರಸಭೆ ಆಡಳಿತ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಬೇಕಾಬಿಟ್ಟಿ ಅನುಮೋದನೆ ಪಡೆಯುವ ಮೂಲಕ ದುರಾಡಳಿತ ನಡೆಸಲಾಗುತ್ತಿದೆ ಎಂದು ದೂರಿದರು.
ಜೆಡಿಎಸ್‌ನ ಸಿ.ಅರ್. ಶಂಕರ್ ಮಾತನಾಡಿ, ಯಾವುದೇ ಕೆಲಸವನ್ನು ನಗರಸಭೆಯಿಂದ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಆಯುಕ್ತರು ಹಾಗೂ ಅಧ್ಯಕ್ಷರು ನಮ್ಮೊಂದಿಗೆ ಸಹಕರಿಸುತ್ತಿಲ್ಲ. ಬಹುತೇಕ ವಾರ್ಡ್‌ಗಳಳಲ್ಲಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಭೆಯ ಅರ್ಧದಲ್ಲಿಯೇ ‘ಇಂದು ನಡೆದ ಸಭೆಯಲ್ಲಿ ಮಂಡಿಸಿದ ವಿಷಯಗಳಿಗೆ ಸರ್ವಾನುಮತದ ಒಪ್ಪಿಗೆ ದೊರೆತಿದೆ’ ಎಂದು ಹೇಳುವ ಮೂಲಕ ಅಧ್ಯಕ್ಷ ಆರ್. ಮೋಹನ ಕುಮಾರ್ ಮತ್ತು ಶಾಸಕ ಪ್ರೀತಮ್ ಗೌಡ ಸಭೆಯಿಂದ ಹೊರ ನಡೆದರು.
ಈ ಸಂದರ್ಭದಲ್ಲಿ ವೇದಿಕೆಯಿಂದ ಇಳಿದು ಹೊರಹೋಗಲು ಪ್ರಯತ್ನಿಸಿದ ಆಯುಕ್ತರನ್ನು ತಡೆದ ಜೆಡಿಎಸ್ ಸದಸ್ಯರು ‘ಸಭೆ ಮುಕ್ತಾಯವಾಗಿಲ್ಲ ಹಾಗೂ ನಮ್ಮ ಒಪ್ಪಿಗೆಯನ್ನು ದಾಖಲಿಸಿಲ್ಲ, ಹೀಗೆ ಏಕಾಏಕಿ ಹೊರ ನಡೆದರೆ ಹೇಗೆ’ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಅಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು.
ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಯಲಿ:
ಸಭೆ ಮುಗಿಸಿ ಹೊರಬಂದ ಶಾಸಕ ಪ್ರೀತಮ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳ ಅಕ್ರಮ ಕಂಡುಬಂದಲ್ಲಿ ಸಿಬಿಐ, ಲೋಕಾಯುಕ್ತ ಸೇರಿದಂತೆ ಯಾವುದೇ ತನಿಖೆಗೂ ಸಿದ್ಧ ಎಂದು ಸ್ಪಷ್ಟಪಡಿಸಿದರು
ಪಕ್ಷಭೇದ ಮರೆತು ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸ ನಡೆಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಘಟನೊತ್ತರ ಮಂಜೂರಾತಿನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಸಭೆಯಲ್ಲಿ ಗದ್ದಲ ಎಬ್ಬಿಸುವುದು ಸರಿಯಲ್ಲ ಎಂದರು.