ಕೋಲಾರ: ಭ್ರಷ್ಟಾಚಾರ ಮಾಮೂಲಿಯಾಗಿದ್ದು, ಮಾಮೂಲಿಯಿಂದ ಪ್ರಾಮಾಣಿಕತೆಯೆಡೆಗೆ ಸಾಗುವ ಜತೆಗೆ ಜನರನ್ನು ಒಟ್ಟುಗೂಡಿಸಲು ಇರುವ ಪ್ರಬಲ ಅಸ್ತ್ರವಾಗಿ ಪಾದಯಾತ್ರೆ ನಡೆಸಲಾಗುತ್ತಿದೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ ಪಟೇಲ್ ಹೇಳಿದರು.
ಜೆಡಿಯು ವತಿಯಿಂದ ಕರ್ನಾಟಕ ಕಲ್ಯಾಣಕ್ಕಾಗಿ ಶುಕ್ರವಾರ ನಗರದ ಗಾಂಧಿವನದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಕೋಲಾರ- ಬೆಂಗಳೂರು ನಡುವಿನ 75 ಕಿಮೀ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಭ್ರಷ್ಟಾಚಾರ ಎನ್ನುವುದಕ್ಕಿಂತ ಭ್ರಷ್ಟಾಚಾರದಲ್ಲಿ ಯಾರಿಲ್ಲ ಎಂದು ನೋಡಬೇಕಾಗಿದೆ. ಪ್ರಾಮಾಣಿಕತೆಯುಳ್ಳ ನಾಲ್ಕೈದು ಜನರಿದ್ದರೂ ಸಾಕು, ದೇಶ-ರಾಜ್ಯ ಕಟ್ಟಲು ಸಾಧ್ಯ. ಒಳ್ಳೆಯ ಹೃದಯದಿಂದ ಬಂದಿರುವವರು ನನ್ನ ಜತೆಗಿದ್ದಾರೆ. ಈ ಮೂಲಕ ಕರ್ನಾಟಕ ಕಲ್ಯಾಣ, ಕರ್ನಾಟಕವನ್ನು ಸಮಗ್ರವಾಗಿ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಅಸ್ತಿತ್ವ ಕಳೆದುಕೊಂಡು ತಾವೇ ಉಳಿದುಕೊಳ್ಳಲು ಶ್ರಮಪಡುತ್ತಿರುವಾಗ ಜನ ಸರ್ಕಾರವನ್ನು ನಂಬಿ ಜೀವನ ಮಾಡುವ ಸ್ಥಿತಿಯಲ್ಲಿಲ್ಲ. ಸರ್ಕಾರಗಳನ್ನು ಗಣನೆಗೆ ತೆಗೆದುಕೊಳ್ಳದೆ, ತೆಗಳುವುದು ಅಥವಾ ವಿರೋಧಿಸುವುದು ಬೇಕಿಲ್ಲ. ಗ್ರಾಮದ ಜನರನ್ನು ತಲುಪಲು ಅತ್ತ ಮುಖ ಮಾಡಿ ಅವರ ಜತೆಗೆ ಒಟ್ಟಾಗಿ ಜೀವನ ನಡೆಸುವ ಕಡೆ ಹಳ್ಳಿಗರನ್ನು ಎಚ್ಚರಿಸಬೇಕಿದೆ ಎಂದರು.
ವಿರೋಧ ಮಾಡುವುದು ಸರಿಯಾದ ರಾಜಕಾರಣ ಅಲ್ಲ. ಬೆಂಕಿ ಬಿದ್ದಾಗ ಸಣ್ಣ ಹಕ್ಕಿ ಎಷ್ಟು ನೀರು ತಂದು ಹಾಕಲು ಸಾಧ್ಯವೋ ಆ ರೀತಿ ಎಷ್ಟು ಮಾಡಲು ಸಾಧ್ಯವೋ ಅಷ್ಟನ್ನು ಮಾಡಿಕೊಂಡು ಮುಂದೆ ಸಾಗುತ್ತೇವೆ. ದೊಡ್ಡವರ ಸುದ್ದಿ ಹೆಚ್ಚು ಮಾತನಾಡುವುದಿಲ್ಲ ಎಂದರು.
ಜನರ ಮನಸ್ಸು, ಭಾವನೆ ಒಟ್ಟುಗೂಡಿಸಲು ಪಾದಯಾತ್ರೆ ಪ್ರಬಲ ಅಸ. ಕಲ್ಯಾಣ ಕರ್ನಾಟಕದ ಭಾಗವಾಗಿ 2000 ಕಿಮೀ ಪಾದಯಾತ್ರೆ ನಾಲ್ಕೈದು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನಾವು ಯಾವುದರ ಮೇಲೆ ಒತ್ತು ನೀಡುತ್ತೇವೋ ಅದು ಅಸ್ತಿತ್ವಕ್ಕೆ ಬರುತ್ತದೆ. ನಿರಂತರ ಗಮನ ಕೊಡುತ್ತಿದ್ದರೆ ದೊಡ್ಡದಾಗುತ್ತಾ ಹೋಗುತ್ತದೆ. ಕರೊನಾ ತಿಂಗಳಾನುಗಟ್ಟಲೆ ಸುದ್ದಿಯಲ್ಲಿತ್ತು. ಈಗ ಡ್ರಗ್, ಮುಂದೆ ಏನಾಗುತ್ತದೆ ಎಂದು ಕಾಯಬೇಕು. ಹೊಸದು ಬಂದಾಗ ಹಳೆಯದನ್ನು ಜನ ಮರೆಯುತ್ತಾರೆ. ತಪ್ಪು ಮಾಡಿದರೆ ಕಾನೂನು ಕ್ರಮಕ್ಕೆ ಒಳಪಡಿಸಲು ಪೊಲೀಸರು ಇದ್ದಾರೆ ಎಂದರು.
ಜೆಡಿಯು ಯುವ ಘಟಕ ರಾಜ್ಯಾಧ್ಯಕ್ಷ ಡಾ.ನಾಗರಾಜ್, ಕಾರ್ಯಾಧ್ಯಕ್ಷ ಲಖನ್ ಸುರೇಶ್, ಯುವ ಘಟಕ ಜಿಲ್ಲಾಧ್ಯಕ್ಷ ಗಂಗರಾಜು, ಮುಖಂಡರಾದ ಮಲ್ಲೇಕುಪ್ಪ ಅಂಬರೀಷ್, ಲಕ್ಷೀಪುರ ಅನಂತ್, ಪದ್ಮನಾಭ ಹಾಗೂ ಪಕ್ಷದ ಕಾರ್ಯಕರ್ತೆಯರು, ಮುಖಂಡರು ಪಾಲ್ಗೊಂಡಿದ್ದರು.