ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಉದ್ಘಾಟಿಸಿದರು 
ಜಿಲ್ಲೆ

ಭ್ರಷ್ಟಾಚಾರ ತಡೆಗೆ ಎಲ್ಲರು ಕೈ ಜೋಡಿಸಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಭ್ರಷ್ಟಾಚಾರ ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದರ ತಡೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜಂಟಿಯಾಗಿ ಕೈ ಜೋಡಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಅ.೨೮ ರಿಂದ ನವೆಂಬರ ೩ ವರೆಗೆ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷಾದಾರಗಳ ಕೊರತೆ ಇದ್ದಲ್ಲಿ ತಿರ್ಮಾಣ ಕೈಗೊಳ್ಳಲು ವಿಳಂಬವಾಗುತ್ತದೆ. ಆ ದಿಶೆಯಲ್ಲಿ ಪ್ರಥಮದಲ್ಲಿಯೇ ಭ್ರಷ್ಟಾಚಾರ ಮಾಡದಂತೆ ಆಮಿಷಕ್ಕೆ ಒಳಗಾಗದಂತೆ ಜಾಗೃತರಾಗಿ ಕಾರ್ಯನಿರ್ವಹಿಸುವುದು ಸುರಕ್ಷಿತ ಮಾರ್ಗವಾಗಿದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಯಾವುದೇ ಸರ್ಕಾರಿ ಅಧಿಕಾರಿಗಳು ಜನ ಸೇವಕರು ಎಂಬುದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದ್ದು, ಭ್ರಷ್ಟಾಚಾರ ಎಂಬುದು ಅಪರಾಧ ಎಂದು ಪ್ರತಿಯೊಬ್ಬರು ಮನವರಿಕೆ ಮಾಡಿಕೊಳ್ಳಬೇಕು. ಕೇವಲ ಸರ್ಕಾರಿ ಕೆಲಸದಲ್ಲಿದ್ದವರು ಭ್ರಷ್ಟಾಚಾರಿಗಳಿಲ್ಲದೇ ಇದ್ದರು. ಕಚೇರಿಗೆ ಬಂದ ಸಾರ್ವಜನಿಕರು ತಮ್ಮ ಕಾರ್ಯದಾಸೆಗೆ ಹಣದ ಆಸೆ ಒಡ್ಡುವ ಪ್ರಸಂಗದಿಂದ, ಭ್ರಷ್ಟಾಚಾರ ಮೊದ ಮೊದಲು ರುಚಿ ಎನಿಸಿದರೂ ಕೊನೆಗೆ ವಿಷವಾಗುವುದೆಂಬುದು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜಿ.ಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಸಮಾಜದ ಹಿತದೃಷ್ಠಿಯಿಂದ ಹಾಗೂ ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ನೌಕರರ ಕರ್ತವ್ಯವಾಗಿದೆ. ಹತ್ತು ಹಲವಾರು ಸರ್ಕಾರಿ ಯೋಜನೆ ಅನುಷ್ಠಾನ ಮಾಡುವಲ್ಲಿ ಆಯೋಜನೆಗೆ ಸಂಬಂಽಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾತನಾಡಿ, ಸೇವೆಯಲ್ಲಿ ಮುಖ್ಯವಾಗಿ ಪಾರದರ್ಶಕತೆ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಸರ್ಕಾರದ ನಿಯಮಗಳನ್ವಯ ಇತಿ ಮಿತಿಯಲ್ಲಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಈ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಽಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.