ಮುಧೋಳ: ವಸತಿ ಮತ್ತು ಇನ್ನಿತರ ಇಲಾಖೆಯಲ್ಲಿ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ವತಿಯಿಂದ ಇಲ್ಲಿನ ನಗರಸಭೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮುಖಂಡ ನಾಗಪ್ಪ ಅಂಬಿ ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರೇ ಬಹಿರಂಗ ಪಡಿಸಿದ್ದಾರೆ. ಇಲ್ಲಿನ ನಗರ ಸಭೆಯಲ್ಲಿಯೂ ಎ ಖಾತಾ, ಬಿ ಖಾತಾ ಮಾಡುವವರು 5,000 ರೂ. ಕೊಟ್ಟರೆ ಮಾತ್ರಾ ಉತಾರ ಕೊಡುತ್ತಿದ್ದಾರೆ. ನಗರಸಭೆಯಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪ ಮಾಡಿದರು.
ಬಿಜೆಪಿ ಮುಖಂಡ ಬಸು ದಾಸರ ಮಾತನಾಡಿ, ಆಶ್ರಯ ಮನೆಯಲ್ಲಿ 2,000 ಮನೆ ಅರ್ಜಿ ಹಾಕಿದ್ದು, ಈವರೆಗೂ ಒಂದೇ ಒಂದು ಮನೆ ಕೊಟ್ಟಿಲ್ಲ. ಕಾಂಗ್ರೆಸ್ ಬಡವರ ಪಕ್ಷ ಎಂದು ಸುಳ್ಳು ಹೇಳಿಕೊಂಡು, ಇದೀಗ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸಂಗಣ್ಣ ಕಾತರಕಿ, ಜಿಲ್ಲಾ ಕಾರ್ಯದರ್ಶಿ ರವಿ ನಂದಗಾಂವ, ನಗರಸಭೆ ಸದಸ್ಯರಾದ ಗುರುಪಾದ ಕುಳಲಿ, ಮಂಜು ಮಾನೆ, ಮುಖಂಡರಾದ ಕಲ್ಲಪ್ಪಣ್ಣ ಸಬರದ, ಕರಬಸಯ್ಯ ಹಿರೇಮಠ, ಯುವ ಮೋರ್ಚಾ ಅಧ್ಯಕ್ಷ ಅನುಪ್ ಚವ್ಹಾಣ, ಸುನೀಲ ನಿಂಬಾಳಕರ ಇದ್ದರು.