ಬಳ್ಳಾರಿ : ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಪೊಲೀಸರು ಬಂಧನದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಮೊದಲ ದಿನ ಶುಕ್ರವಾರ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರದಿಂದ ಬೃಹತ್ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ಆಗಮಿಸಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತವರ ಬಿಜೆಪಿ ಕಾರ್ಯಕರ್ತರು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಡಿಸಿ ಕಚೇರಿ ಎದುರುಗಡೆಯೇ ಧರಣಿ ಕುಳಿತು ಧರಣಿಯನ್ನು ಮುಂದುವರೆಸಿದರು. ಬಳಿಕ ಸ್ಥಳದಲ್ಲೇ ಶುಕ್ರವಾರ ರಾತ್ರಿ ಹನ್ನೇರಡು ಗಂಟೆವರೆಗೆ ಅಹೋರಾತ್ರಿ ಧರಣಿ ನಡೆಸಿದ ಪ್ರತಿಭಟನಾ ನಿರತ ಮಾಜಿ ಸಚಿವ ಶ್ರೀರಾಮುಲು ಮತ್ತವರ ಕಾರ್ಯಕರ್ತರು, ನಂತರ ಸ್ಥಗಿತಗೊಳಿಸಿ, ಮರುದಿನ ಶನಿವಾರ ಬೆಳಗ್ಗೆ ಎಂಟು ಗಂಟೆಯಿಂದ ಪ್ರತಿಭಟನಾ ಧರಣಿ ಸ್ಥಳಕ್ಕೆ ಆಗಮಿಸಿ ಪುನಃ ಮುಂದುವರೆಸಿದರು. ಪ್ರಕರಣದಲ್ಲಿ ಪ್ರಮುಖ ಕಿಂಗ್‌ಪಿನ್ ಯಾರು ಎಂಬುದು ಪತ್ತೆಯಾಗಬೇಕು. ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ಮಾತ್ರವಲ್ಲ. ಅವರ ಬಂಧನವಾಗಬೇಕು ಎಂದು ಪ್ರತಿಭಟನಾನಿರತ ರಾಮುಲು ಪಟ್ಟುಹಿಡಿದು, ಶನಿವಾರ ಮಧ್ಯಾಹ್ನವರೆಗೆ ಧರಣಿ ನಡೆಸಿದ್ದರು. ಆದರೆ, ಪ್ರತಿಭಟನೆಗೆ ಒಂದೇ ದಿನ ಮಾತ್ರ ಅನುಮತಿ ಪಡೆದಿರುವುದರಿಂದ ಬಂಧನ ಮಾಡುವುದಾಗಿ ಎಎಸ್ಪಿ ರವಿಕುಮಾರ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಹೇಳಿದ ಕೂಡಲೇ ಬೆಂಬಲಿಗರು ದಿಕ್ಕಾರ ಕೂಗಿ ಅಕ್ರೋಶ ಹೊರ ಹಾಕಿದರು. ಮಾಜಿ ಸಚಿವ ಶ್ರೀರಾಮುಲು ಹಾಗೂ ಬೆಂಬಲಿಗರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.
ಮಾಜಿ ಸಚಿವ ಶ್ರೀರಾಮುಲು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಬಿ. ನಾಗೇಂದ್ರ ಬಂಧನವಾಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರೆಯುವುದು. ಇಷ್ಟು ದಿನ ಇಲ್ಲದ ಎಸ್‌ಐಟಿ ತಂಡ ಬಿಜೆಪಿ ಪ್ರತಿಭಟನೆ ಬಳಿಕ ಸಕ್ರಿಯವಾಗಿದೆ. ನಿನ್ನೆ ನಿಗಮದ ಎಂಡಿ ಬಳಿ ಯಿಂದ ಕೋಟಿಗಟ್ಟಲೇ ಹಣ ಜಪ್ತಿ ಮಾಡಲಾಗಿದೆ. ಕಾರು ಕೂಡ ಜಪ್ತಿ ಮಾಡಲಾಗಿದೆ. ಇದನ್ನು ಕಳೆದೊಂದು ತಿಂಗಳಿಂದ ಯಾಕೆ ಇಷ್ಟೊಂದು ಹಣ ಜಪ್ತಿ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು. ಕೇವಲ ಅಧಿಕಾರಿಗಳಷ್ಟೇ ಅಲ್ಲದೇ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಕಾಣದ ಮತ್ತಷ್ಟು ಕೈಗಳು ಇದರಲ್ಲಿ ಭಾಗಿಯಾಗಿವೆ. ನಿಗಮದ ಹಣ ಲೂಟಿ ಹೊಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈ ಪ್ರಕರಣವನ್ನು ಸಿಬಿಐ ವಹಿಸಬೇಕು ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ಅನುಮಾನಿಸಬೇಕಾಗುತ್ತದೆ. ಸಿದ್ದರಾಮಯ್ಯ ಪಾತ್ರ ಇಲ್ಲವಾದರೆ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಹಿರಿಯ ಮುಖಂಡ ಮಹಿಪಾಲ್, ಉಜ್ವಲಾ ಶ್ರೀಧರ, ಪಾಲಿಕೆ ಮಾಜಿ ಸದಸ್ಯ ಮಲ್ಲನಗೌಡ, ಅಡವಿಸ್ವಾಮಿ ಇದ್ದರು.