ಜಿಲ್ಲೆ

ಭ್ರಷ್ಟರಿಗೆ ಶಿಕ್ಷೆಯಾದರೆ ಇತರರಿಗೆ ಎಚ್ಚರಿಕೆ ಗಂಟೆ

ಚಿತ್ರದುರ್ಗ: ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮ ಶೇಖರ್ ಅಭಿಪ್ರಾಯಪಟ್ಟರು.

ಲೋಕಾಯುಕ್ತ, ಜಿಲ್ಲಾಡಳಿತ ಸಹಯೋಗದಲ್ಲಿ ಬುಧವಾರ ಜಿಪಂದಲ್ಲಿ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದ ನಿಯಂತ್ರಣಕ್ಕೆ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಜತೆಗೆ ದಕ್ಷ ಆಡಳಿತಕ್ಕೂ ತಂತ್ರಜ್ಞಾನ ಸಹಕಾರಿಯಾಗಿದೆ. ಭ್ರಷ್ಟಾಚಾರದಿಂದಾಗಿ ಹಲವು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಇದರಿಂದ ಅರ್ಹರಿಗೆ ಯೋಜನೆಗಳ ಲಾಭ ದೊರೆಯುವುದಿಲ್ಲ. ಫಲಾನುಭವಿಗಳಿಗೆ ನಿರ್ದಿಷ್ಟ ಅವಧಿಯೊಳಗೆ ಯೋಜನೆಗಳನ್ನು ತಲುಪಿಸಲು ಸಕಾಲ ಹಾಗೂ ಇ-ಆಫೀಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕ ಕೆಲಸದಲ್ಲಿ ವಿಳಂಬ ತಪ್ಪಿಸ ಬಹುದಾಗಿದೆ ಎಂದರು.

ಅಧಿಕಾರಿಗಳು ಕಡತಗಳನ್ನು ಇ-ಆಫೀಸ್ ಮೂಲಕವೇ ವಿಲೇವಾರಿ ಮಾಡಬೇಕು. ಪರಿಣಾಮಕಾರಿ ಆಡಳಿತಕ್ಕಾಗಿ ಬಹಳ ವರ್ಷಗಳಿಂದ ಬೇರೂರಿರುವ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಬೇಕು. ಇದೇ ಕಾರಣಕ್ಕೆ ಉನ್ನತ ಅಧಿಕಾರಿಗಳ ವರ್ಗಾವಣೆಯನ್ನೂ ಸರ್ಕಾರ ನಿಯಮಿತವಾಗಿ ಮಾಡುತ್ತಿದೆ ಎಂದರು.

ಅಧಿಕಾರಿ, ನೌಕರರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದರೆ ಅಂತಹವರ ವಿರುದ್ಧ ಲೋಕಾಯುಕ್ತ ಕ್ರಮ ತೆಗೆ ದುಕೊಳ್ಳುತ್ತಿದೆ. ಯೋಜನೆಗಳ ಜಾರಿ ವಿಳಂಬ ತಪ್ಪಿಸಲೂ ಲೋಕಾಯುಕ್ತದ ಕಣ್ಗಾವಲಿರುತ್ತದೆ. ತಪ್ಪಿತಸ್ಥ ಅಧಿಕಾರಿ, ನೌಕರರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯಾದರೆ ಇತರರಿಗೆ ಎಚ್ಚರಿಕೆಯಾಗಲಿದೆ.

ಭ್ರಷ್ಟಾಚಾರ ಪ್ರತಿಬಂಧಕ, ಲೋಕಾಯುಕ್ತ ಕಾಯ್ದೆ, ನಡವಳಿಕೆ ಹಾಗೂ ನಿಯಮಗಳ ಕುರಿತು ನೌಕರರಲ್ಲಿ ಜಾಗೃತಿ ಮೂಡಿಸಬೇಕು.ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ನೌಕರರಿಗೆ ಪ್ರೇರೇಪಿಸಬೇಕೆಂದು ಸಿಇಒ ಹೇಳಿದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ, ನೈತಿಕತೆ, ಮಾನವೀಯ ಗುಣಗಳನ್ನು ಅಧಿಕಾರಿ, ಸಿಬ್ಬಂದಿ ಅಳವಡಿಸಿಕೊಳ್ಳಬೇಕು. ಅಧಿಕಾರಿ, ನೌಕರರಿಗೆ ಸಾಕಷ್ಟು ಆರ್ಥಿಕ ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಜನರನ್ನು ಕಚೇರಿಗಳಿಗೆ ಅಲೆದಾಡಿಸದೆ ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ‌್ಯಗಳನ್ನು ಮಾಡಿಕೊಡಬೇಕೆಂದರು.

ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಶೇ.70 ಅಧಿಕಾರಿ ನೌಕರರು ಕೆಳವರ್ಗ, ಬಡತನದಿಂದ ಬಂದವರು. ಇದನ್ನು ಮನ ದಲ್ಲಿ ಇಟ್ಟುಕೊಂಡು ರೈತರು, ಸಾರ್ವಜನಿಕರ ಕೆಲಸ ಮಾಡಬೇಕು ಎಂದರು.

ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಎಫ್ ಟಿ.ರಾಜಣ್ಣ ಮತ್ತಿತರರು ಇದ್ದರು. ಲೋಕಾಯುಕ್ತ ಡಿವೈಎಸ್‌ಪಿ ಮೃತ್ಯುಂಜಯ ಪ್ರತಿಜ್ಞಾ ವಿಧಿ ಬೋಧಿಸಿದರು.

-----

ಕೋಟ್

ಪ್ರಾಮಾಣಿಕ ಹಾಗೂ ನಿಯಮಬದ್ಧವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗೆ ಲೋಕಾಯುಕ್ತದಿಂದ ಯಾವುದೇ ತೊಂದರೆ ಆಗುವುದಿಲ್ಲ.

ಟಿ.ರಾಜಣ್ಣ, ಡಿಸಿಎಫ್, ಚಿತ್ರದುರ್ಗ

---

ಕಾರ‌್ಯಾಚರಣೆ ಪೂರ್ವಗ್ರಹ ಪೀಡಿತವಲ್ಲ

ಯಾವುದೇ ಪೂರ್ವಗ್ರಹ ಪೀಡಿತವಾಗಿ ಲೋಕಾಯುಕ್ತ ಸಂಸ್ಥೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾರ್ಯಾಚರಣೆ ನಡೆಸುವುದಿಲ್ಲ. ಆಪಾ ದನೆ ಕೇಳಿಬಂದಾಗ ಸಂಪೂರ್ಣ ವಿವರದೊಂದಿಗೆ, ಬಹುದಿನಗಳ ಕಾಲ ನಿಗಾ ಇರಿಸಲಾಗುತ್ತದೆ. ಆಪಾದನೆಯಲ್ಲಿ ಶೇ.100 ಸತ್ಯ, ಲಂಚಕ್ಕೆ ಬೇಡಿಕೆ, ವಿಳಂಬಕ್ಕೆ ಲಭ್ಯ ಸಾಕ್ಷ್ಯಾಧಾರಗಳು ಪೂರಕವಾಗಿದ್ದಾಗ ದಾಳಿ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ದುರುದ್ದೇಶ ಇರುವುದಿಲ್ಲ.

ಎನ್.ವಾಸುದೇವರಾಮ್, ಎಸ್‌ಪಿ, ಲೋಕಾಯುಕ್ತ, ಚಿತ್ರದುರ್ಗ.

----