ಜಿಲ್ಲೆ

ಭ್ರಷ್ಟ ಗ್ರಾಪಂ ಸದಸ್ಯನ ವಿರುದ್ಧ ಕ್ರಮಕ್ಕೆ ಆಗ್ರಹ

ಹಾಸನ: ಸಕಲೇಶಪುರ ತಾಲೂಕು ಬಾಳ್ಳುಪೇಟೆ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸ್ವಾಮಿ ಹೆಚ್.ಎಂ. ಹಾಗೂ ಲೆಕ್ಕಾಧಿಕಾರಿ ಶಾಮೀಲಾಗಿ ಸರಕಾರಿ ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಮುಖಂಡ ಶೇಕ್ ಅಬ್ಬ, ಬೆಳಗೋಡು ಹೋಬಳಿ ಹಸಗವಳ್ಳಿ ಗ್ರಾಮದ ಜೆ.ಪಿ.ನಗರದ ಸ.ನಂ. 72 ರಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಿಗೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ಅನುಭವಿದಾರರು ಅವರ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಈ ನಡುವೆ ಸ್ವಾಮಿ, ಅಧಿಕಾರ ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳನ್ನು ಬೆದರಿಸಿ ಸರ್ಕಾರಿ ಕಡತಗಳನ್ನು ತನ್ನ ಕಚೇರಿಗೆ ತರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಫಲಾನುಭವಿಗಳಿಗೆ ಕಡತಗಳನ್ನು ತೋರಿಸಿ ಅವರಿಂದ ಹಣದ ಬೇಡಿಕೆ ಇಟ್ಟು ವಂಚಿಸುವ ಆರೋಪ ಕೇಳಿ ಬಂದಿದೆ ಎಂದರು.
ಇದಕ್ಕೂ ಮೊದಲು ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾತೆ ಹಾಗೂ ಇ-ಸ್ವತ್ತು ಮಾಡಿಕೊಡಲು 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು ಸಾಬೀತಾಗಿದೆ.
ಸರ್ಕಾರಿ ಕಡತ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿರುವ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕ ಉದೀಶ್ ಬಾಳ್ಳುಪೇಟೆ ಮಾತನಾಡಿ, ಹಲವು ದಿನಗಳಿಂದಲೂ ಅಕ್ರಮದಲ್ಲಿ ಭಾಗಿಯಾಗಿರುವ ಸ್ವಾಮಿ ವಿರುದ್ಧ ತನಿಖೆ ನಡೆಸಬೇಕು. ಮೇಲಧಿಕಾರಿಗಳು ತನಿಖೆಗೆ ಆದೇಶ ಮಾಡಬೇಕು. ಸದಸ್ಯರ ಪ್ರಭಾವ ಬಳಸಿ ಅಧೀನ ಸಿಬ್ಬಂದಿಗೆ ಬೆದರಿಕೆ ಹಾಕಿರುವುದು ಕಂಡು ಬಂದಿದೆ. ಹೀಗಾಗಿ ತಪ್ಪು ಮಾಡಿರುವ ಎಲ್ಲರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಗ್ರಾಪಂ ಸದಸ್ಯ ರಾಜೇಶ್, ಬಿಜೆಪಿ ಮುಖಂಡರಾದ ರವಿ, ಕಿಶೋರ್ ಶೆಟ್ಟಿ, ಭೀಮ್ ಆರ್ಮಿಯ ವಿಕ್ರಮ್ ಸಕ್ಪಾಲ್ ಇದ್ದರು.