ಜಿಲ್ಲೆ

ಭ್ರಷ್ಟ ಅಧಿಕಾರಿಗಳಿಗೆ ಶಾಕ್ ರಾಯಚೂರು ಎಡಿಯ ಕಲಬುರಗಿ ತೋಟದ ಮನೆ ಮೇಲೆ ಲೋಕಾಯುಕ್ತರ ದಾಳಿ : ಬೀಗ ಒಡೆದು ಪರಿಶೀಲನೆ

ಬಾಬುರಾವ ಯಡ್ರಾಮಿ

ಕಲಬುರಗಿ : ರಾಯಚೂರು ಜಿಲ್ಲಾ ಗ್ರಾಮೀಣ ಮತ್ತು ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ‌ಮಡಿವಾಳ ಅವರಿಗೆ ಸೇರಿದ ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿ ಸಮೀಪದ ತೋಟದ ಮನೆ ಹಾಗೂ ಮನೆಯ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಕಲಬುರಗಿ ಯಾದಗಿರಿ ರಾಯಚೂರು ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರು ಶಾಕ್ ಕೊಟ್ಟಿದ್ದಾರೆ.

ಶರಣಪ್ಪ ರಾಯಚೂರಿನಲ್ಲಿ ಕೆಲಸ ಮಾಡುತ್ತಿದ್ದು ಮೂಲತಃ ಕಲಬುರಗಿ ಜಿಲ್ಲೆಯ ಆಳಂದನವರು.

ಅಲ್ಲಿನ ಬಂಗಲೆ, ಕಚೇರಿ ಮೇಲೆ ಹಾಗೂ ಕಲಬುರಗಿ ತೋಟದ ಮನೆ ಮೇಲೆ ಲೋಕಾಯುಕ್ತರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ನಾಗನಹಳ್ಳಿ- ಖಣದಾಳ ರಸ್ತೆಯಲ್ಲಿ ಇರುವ ತೋಟದ ಮನೆಗೆ ಲೋಕಾ ಅಧಿಕಾರಿಗಳು ಹೋದಾಗ ಅಲ್ಲಿ ಯಾರು ಇರಲಿಲ್ಲ. ಹೀಗಾಗಿ ಬೀಗ ದುರಸ್ತಿ ಮಾಡುವವರನ್ಬು ಕರೆಯಿಸಿಕೊಂಡು ತೋಟದ ಮನೆಯ ಬೀಗ ಒಡೆದು ಪರಿಶೀಲನೆ ಮಾಡಲು ಶುರುವಿಟ್ಟರು.

ಕಲಬುರಗಿ ಲೋಕಾಯುಕ್ತ ಎಸ್ಪಿ ಕರ್ನೂಲ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ದ್ರವತಾರಾ ಇತರ ಅಧಿಕಾರಿಗಳು ಸೇರಿಕೊಂಡು ದಾಳಿ ನಡೆಸಿದ್ದಾರೆ. ಸಂಜೆಯವರೆಗೂ ಶೋಧ ಕಾರ್ಯ ನಡೆಯಲಿದೆ. ಬಳಿಕವೇ ಏನೇನು ಪತ್ತೆಯಾದವು ಎಂಬುದು ಗೊತ್ತಾಗಲಿದೆ ಎಂದು ಲೋಕಾಯುಕ್ತರು ಹೇಳಿದ್ದಾರೆ.