ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆಯೆಂದು ಆಡಳಿತಾರೂಢ ಬಿಜೆಪಿ ಸದಸ್ಯರೇ ಧ್ವನಿ ಎತ್ತಿದ್ದಾರೆ. ತಕ್ಷಣ ಭ್ರಷ್ಟ ಅಧಿಕಾರಿಗಳನ್ನು ಬೇರೆಡೆಗೆ ಎತ್ತಂಗಡಿ ಮಾಡಿ ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೋಮವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ರವಾನಿಸಿದ್ದಾರೆ.
ಇತ್ತೀಚೆಗೆ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಪಾಲಿಕೆ ಸದಸ್ಯರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಪ್ರತಿಯೊಂದು ಕೆಲಸಕ್ಕೂ ಹಣ ಕೇಳುವುದು ಸರಿಯಲ್ಲ. ಮೇಯರ್ ಅವರು ಭ್ರಷ್ಟ ಅಧಿಕಾರಿಗಳ ಕರಾಳ ಮುಖವನ್ನು ಇನ್ನಷ್ಟು ಬಯಲು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹು-ಧಾ ಮಹಾನಗರದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಗಾ ವಹಿಸಬೇಕಿದೆ ಎಂದು ಹೇಳಿದೆ.
ಪಕ್ಷದ ಪದಾಧಿಕಾರಿಗಳಾದ ಅನಂತ ಬುಗಡಿ, ವಿಕಾಸ ಸೊಪ್ಪಿನ, ಪ್ರತಿಭಾ ದಿವಾಕರ, ಸುನಂದಾ ಕರಡಿಗುಡ್ಡ, ಭೀಮಪ್ಪ ಪೂಜಾರ, ಹಸನ ಇನಾಂದಾರ, ಮಲಪ್ಪ ತಡಸದ, ಮಲ್ಲಿಕಾರ್ಜುನ ಹಿರೇಮಠ, ಕುಮಾರ ನೂಲ್ವಿ, ಲಕ್ಷ್ಮಣ ನರಸಾಪುರ, ಕಿಶೋರ ಶೆಟ್ಟಿ, ಅಲ್ಲಗೊಂಡ ಬಿರಾದಾರ, ಸಂತೋಷ ಮಾನೆ, ಬಸವರಾಜ ತೇರದಾಳ, ಇತರರು ಇದ್ದರು.