ಹುಬ್ಬಳ್ಳಿ: ಭೌತಿಕ ಮತ್ತು ಪಾರಮಾರ್ಥಿಕತೆಯ ತುರೀಯ ಸ್ಥಿತಿ ತಲುಪುವುದೇ ಯೋಗ. ಭೌತಿಕವಾಗಿ ಶರೀರ ಮತ್ತು ಮನಸನ್ನು ಸಮಸ್ಥಿತಿಗೆ ತರುವುದಾದರೆ, ಪಾರಮಾರ್ಥಿಕವಾಗಿ ಜೀವಾತ್ಮ ಪರಮಾತ್ಮನೊಂದಿಗೆ ಸೇರುವುದೇ ಯೋಗ ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನದಿಂದ ನಗರದ ನೆಹರು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ‘ಯೋಗ ಸಂಗಮ’ದ ಯೋಗ ನಡಿಗೆ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಿರುವುದಿಲ್ಲ. ಮನಸ್ಸಿನ ಆವೇಗ ಹೆಚ್ಚಿರುತ್ತದೆ. ಶರೀರ ಹಿಂದೆ ಇರುತ್ತದೆ. ಯೋಗ ಅವೆರಡನ್ನೂ ಸಮಸ್ಥಿತಿಗೆ ತರುತ್ತದೆ. ಪತಂಜಲಿ ಮುನಿಗಳು ಯೋಗ-ಚಿತ್ತ-ವೃತ್ತಿ ನಿರೋಧ ಎಂದು ಕರೆದರು. ಯೋಗದಲ್ಲಿ ಅಷ್ಟಾಂಗ ಯೋಗಗಳಿವೆ. ಪ್ರತಿಯೊಂದು ಆಸನಗಳು ರೋಗಗಳನ್ನು ನಿಯಂತ್ರಿಸುತ್ತವೆ. ರೋಗ ಬಂದ ಮೇಲೆ ಯೋಗಾಸನಗಳನ್ನು ಮಾಡುವುದಕ್ಕಿಂತ ರೋಗ ಬರುವುದಕ್ಕಿಂತ ಮುನ್ನ ಅಳವಡಿಸಿಕೊಳ್ಳುವುದು ಅಗತ್ಯ. 6 ತಾಸು ನಿದ್ರೆ, ನಿತ್ಯ 4 ಲೀಟರ್ ನೀರು ಕುಡಿಯುವುದು, 2 ಹೊತ್ತು ಊಟ, 2 ಹೊತ್ತು ಪ್ರಾರ್ಥನೆ, ಒಂದು ತಾಸು ಯೋಗ, ವಾರದಲ್ಲಿ ಒಂದು ದಿನ ನಿರಾಹಾರ ಉಪವಾಸ ಮಾಡಬೇಕು ಎಂದರಲ್ಲದೆ, ಪ್ರತಿಯೊಬ್ಬರೂ ಯೋಗಾಸನಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಷಟ್ದರ್ಶನಗಳಲ್ಲಿ ಯೋಗವೂ ಒಂದು. ಎಲ್ಲ ದರ್ಶನಗಳ ಗುರಿ ಒಂದೇ, ಅದು ಭಗವಂತನ ಸಾಕ್ಷಾತ್ಕಾರ. ಇಂಥ ಸಾಕ್ಷಾತ್ಕಾರವನ್ನು ಯೋಗ ಮಾಡಿಕೊಡುತ್ತದೆ. ದುರಾಸೆ, ದುರಹಂಕಾರವನ್ನೂ ದೂರ ಮಾಡುತ್ತದೆ ಎಂದರು.
‘ವಿಶ್ವ ಯೋಗ ದಿನಾಚರಣೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕಕ್ಕೆ ಕರೆತರುವಂತೆ ಎಸ್ಪಿವೈಎಸ್ಎಸ್ನವರು ಕೋರಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕಕ್ಕೆ ಆಹ್ವಾನಿಸುತ್ತೇನೆ ಎಂದು ಭರವಸೆ ನೀಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜ್ಞಾನ-ಧ್ಯಾನದ ಮೂಲಕ ಮುಕ್ತಿ ಕಾಣುವುದೇ ಯೋಗ. ಇವೆಲ್ಲವುಗಳನ್ನು ವೇದಗಳಲ್ಲಿ ಹೇಳಲಾಗಿದೆ.
ಇಂಥ ಯೋಗವನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು. ಯಾರು ಜೀವನೋತ್ಸಾಹದಿಂದ ಇರುತ್ತಾರೋ ಅವರು ಯೋಗಾಸನಗಳನ್ನು ಮಾಡುತ್ತಿದ್ದಾರೆ ಎಂದರ್ಥವೆಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಯೋಗ ಸಂಗಮದ ಸ್ವಾಗತ ಸಮಿತಿ ಸದಸ್ಯ ಶಂಕರಣ್ಣ ಮುನವಳ್ಳಿ ಮಾತನಾಡಿ, ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸುವುದನ್ನು ಯೋಗ ಕಲಿಸಿಕೊಡುತ್ತದೆ. ಸೇವೆ, ಸಾಧನೆ, ಭಗವಂತನ ಸಾಕ್ಷಾತ್ಕಾರ ಇವೆಲ್ಲವೂ ಯೋಗದ ಪ್ರತಿಫಲನಗಳು ಎಂದರು.
ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ ಮಾತನಾಡಿ, ನಮ್ಮ ಪರಂಪರೆಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನ ಇದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ನಾವು ಇದರ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಎಸ್ಪಿವೈಎಸ್ಎಸ್ ಪ್ರಾಂತ ಸಂಚಾಲಕ ಪ್ರಸನ್ನ ದೀಕ್ಷಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ದೇಶಪಾಂಡೆ ಫೌಂಡೇಷನ್ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ, ಸ್ವಾಗತ ಸಮಿತಿ ಸದಸ್ಯರಾದ ರಾಜಣ್ಣ ಕೊರವಿ, ಎಂ.ವಿ. ಕರಮರಿ, ಮಹೇಂದ್ರ ಠಕ್ಕರ, ಪ್ರಕಾಶ ಬೆಂಡಿಗೇರಿ, ರಂಗಾ ಬದ್ದಿ, ರಾಜಶ್ರೀ ಜಡಿ, ಡಾ. ಚೇತನ ಜಾಯದೆ, ಸುಭಾಷ್ಸಿಂಗ್ ಜಮಾದಾರ, ಎಸ್ಪಿವೈಎಸ್ಎಸ್ನ ಸಿ.ವಿ. ಮಹದೇವಯ್ಯ, ಮಹಾದೇವ ಹೊಳೆಯಣ್ಣವರ, ದಯಾನಂದ ಮಗಜಿಕೊಂಡಿ, ಮಂಜುನಾಥ ಬಳಗಾನೂರ, ಇತರರು ಇದ್ದರು.
ಹರಿ ಓಂ ಸ್ಮರಣೆ: ‘ಯೋಗ ನಡಿಗೆ ಆರೋಗ್ಯದ ಕಡೆಗೆ’ ಯಾತ್ರೆ ನಗರದ ರಂಭಾಪುರಿ ಕಲ್ಯಾಣ ಮಂಟಪ, ಪಾಟೀದಾರ ಭವನ, ಹವ್ಯಕ ಭವನ, ವಿಶ್ವನಾಥ ಕಲ್ಯಾಣ ಮಂಟಪ, ವಾಸವಿ ಮಹಲ್, ದೇಶಪಾಂಡೆ ಎಜುಕೇಶನ್ ಟ್ರಸ್ಟ್ನಿಂದ ಪ್ರಾರಂಭಗೊಂಡು ಇಲ್ಲಿನ ನೆಹರು ಮೈದಾನ ತಲುಪಿತು. ಸಾವಿರಾರು ಜನರು ಹಳದಿ ಟಿ ಶರ್ಟ್ ಧರಿಸಿ ‘ಹರಿ ಓಂ‘ ನಾಮಸ್ಮರಣೆ ಮಾಡುತ್ತ ಸಾಗಿದರು.
ನಾವೆಲ್ಲ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ವಿದೇಶಿಗರು ನಮ್ಮ ಸಂಸ್ಕೃತಿ ನೆಚ್ಚಿ ಆಗಮಿಸುತ್ತಿದ್ದಾರೆ. ಇದು ವಿಪರ್ಯಾಸ. ನಮ್ಮ ದೇಶದಲ್ಲಿ ಹಿರಿಯರು, ಋಷಿಮುನಿಗಳು ಹಾಕಿಕೊಟ್ಟ ಸಂಸ್ಕಾರಯುತ ಜೀವನ ಇಡೀ ವಿಶ್ವಕ್ಕೆ ಮಾದರಿ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. | ಪ್ರಲ್ಹಾದ ಜೋಶಿ ಕೇಂದ್ರ ಸಚಿವ