ಜಿಲ್ಲೆ

ಭೋವಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ನವೆಂಬರ್ 23 ರಂದು ಬಾಗಲಕೋಟೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ. ನವನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ, ಶ್ರೀ ಶರಣಬಸವಾಶ್ರಮದ ನೂತನ ಗುರುಕುಟೀರ ಉದ್ಘಾಟಿಸಲಿದ್ದಾರೆ. 

ಭೋವಿ ಸಮುದಾಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವುದರ ಜತೆಗೆ ವಿಧಾನಪರಿಷತ್‌ ಸದಸ್ಯ ಸ್ಥಾನವನ್ನೂ ನೀಡಬೇಕು ಎಂದು ಭೋವಿ ಜನಾಂಗದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್‌ ತಂಗಡಗಿ ನೇತೃತ್ವದಲ್ಲಿ ಭೋವಿ ಜನಾಂಗದ ನಿಯೋಗವು ಶುಕ್ರವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಸಭೆಯಲ್ಲಿ ಸಮಾಜದ ಮುಖಂಡರು ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಭೋವಿ ಸಮಾಜದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಕುರಿತು ಪಕ್ಷದ ವರಿಷ್ಠರೊಂದಿಗೆ ಗಂಭೀರವಾಗಿ ಚರ್ಚೆ ಮಾಡಲಾಗುವುದು. ಅವರಿಗೆ ವಸ್ತುಸ್ಥಿತಿ ವಿವರಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ನಿಯೋಗಕ್ಕೆ ಭರವಸೆ ನೀಡಿದರು. 

ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ, ಮಾಜಿ ಸಚಿವ ವೆಂಕಟ ರಮಣಪ್ಪ, ಮಾಜಿ ಶಾಸಕ ದುರ್ಗಪ್ಪ ಎಸ್ ಹೂಲಗೇರಿ ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ OCCI ರಾಷ್ರ್ಟೀಯ ಅಧ್ಯಕ್ಷ ರವಿ ಹೆಚ್ ಮಾಕಳಿ ಮತ್ತು ಭೋವಿ ಸಮಾಜದ ಇತರ ಮುಖಂಡರು ಇದ್ದರು.