ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಭೋವಿ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಬೇಕು ಎಂದು ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ 2.5 ಲಕ್ಷ ಭೋವಿ ಸಮಾಜದ ಮತದಾರರಿದ್ದಾರೆ. ಇದರಿಂದಾಗಿ ಗೆಲುವು ಸಾಧಿಸಲು ಸಹಕಾರಿಯಾಗಲಿದೆ. ಈವರೆಗೂ ಕೈ ನಾಯಕರು ಸಮುದಾಯದವರನ್ನು ಗುರುತಿಸಲು ಪ್ರಯತ್ನಿಸಿಲ್ಲ. ಈ ಬಾರಿಯಾದರೂ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು.
4 ದಶಕಗಳ ಹಿಂದೆ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಬಿಟ್ಟರೆ, ಎಡಗೈ ಸಮಾಜದವರಿಗೆ ಹೆಚ್ಚಾಗಿ ಪರಿಗಣಿಸಿ ನೀಡುತ್ತ ಬಂದಿದೆ. ಹೀಗಾಗಿ ಲಂಬಾಣಿ, ಭೋವಿ ಸಮುದಾಯದ ನಿಷ್ಠಾವಂತರಿಗೂ ಮನ್ನಣೆ ಕೊಡಬೇಕು. ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಸ್ಸಿಗೆ 5 ಮೀಸಲು ಕ್ಷೇತ್ರಗಳಿವೆ. ಅದರಲ್ಲಿ ಒಂದು ಕ್ಷೇತ್ರಕ್ಕಾದರೂ ಭೋವಿ ಸಮಾಜ ಪರಿಗಣಿಸಬೇಕು. ಅದರಲ್ಲೂ ಜಿಲ್ಲೆಯ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಕೋರಿದರು.
ಮುಖಂಡ ಆಂಜನೇಯ ಮಾತನಾಡಿ, ಈ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವೇಳೆ ಭೋವಿ ಸಮಾಜವನ್ನು ರಾಷ್ಟ್ರೀಯ ಪಕ್ಷಗಳು ಪರಿಗಣಿಸದೆ ಇದ್ದರೆ, ಸಮುದಾಯದ ಸ್ವಾಮೀಜಿ ಹಾಗೂ ಮುಖಂಡರೊಂದಿಗೆ ಚರ್ಚಿಸಿದ ನಂತರ ಮುಂದಿನ ನಡೆ ಸ್ಪಷ್ಟಪಡಿಸಲಿದ್ದೇವೆ. ಒಂದು ವೇಳೆ ನೀಡಿದಲ್ಲಿ ನಮ್ಮ ಸಮಾಜದ ಮತದಾರರ ನಿರ್ಣಯವೇ ಅಂತಿಮ. ಅದರಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ತಿಪ್ಪೇಸ್ವಾಮಿ, ಪಿ.ದೇವರಾಜು, ಕನಕದಾಸ್ ಇತರರಿದ್ದರು.