ಜಿಲ್ಲೆ

ಭೋವಿ ಸಮಾಜದ ಮಕ್ಕಳಿಗೆ ಕೌಶಲ ಟ್ರೇನಿಂಗ್

ಕಲಬುರಗಿ: ಸಮಾಜದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯಮ ಆರಂಭಿಸಲು ಐದು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುವುದಾಗಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದರು.
ಸಮಾಜದ ಮಕ್ಕಳಿಗೆ ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಲು ತರಬೇತಿ ಕೇಂದ್ರ, ವಸತಿನಿಲಯ ಸ್ಥಾಪಿಸಲಾಗುವುದು. ನಿಗಮದ ಅಭಿವೃದ್ಧಿಗೆ ೫೦೦ ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿಗೆ ಕೋರಲಾಗಿದೆ. ಭೋವಿ ಸಮಾಜದ ಸಮಗ್ರ ಏಳಿಗೆಗಾಗಿ ನಿಗಮದಿಂದ ಕಳೆದ ವರ್ಷ ಶೇ.೮೦ ಅನುದಾನ ವ್ಯಯಿಸಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೬ ಫಲಾನುಭವಿಗಳಿಗೆ ಭೂ ಮಾಲಿಕತ್ವ ನೀಡಲಾಗಿದೆ. ಹಣಕಾಸಿನ ಕೊರತೆ ನೀಗಿಸಲು ಸಿಎಂ ಸಿದ್ದರಾಮಯ್ಯ ಎಲ್ಲ ನಿಗಮದ ಸಭೆ ಕರೆದು ನಿರ್ಧರಿಸಲಿದ್ದಾರೆ. ಭೂಒಡೆತನ, ವಾಹನ ವಿತರಣೆ, ಉದ್ಯೋಗ ಮಿತ್ರ ಸೇರಿ ವಿವಿಧ ಯೋಜನೆಗಳು ಜಾರಿಯಲ್ಲಿದ್ದು, ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ.೫೦ ಸಬ್ಸಿಡಿಯೊಂದಿಗೆ ಒಂದು ಲಕ್ಷ ರೂ. ನೀಡಲಾಗುತ್ತಿದೆ. ಕಲ್ಲು ಒಡೆಯುವ ಸಮುದಾಯದವರು ತೆರೆಮರೆಯಲ್ಲಿದ್ದು, ಭೋವಿ ಸಮಾಜದ ಕಾಲನಿಗಳಿಗೆ ಮೂಲಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಶ್ರೀಮಠದಿಂದ ವಸತಿನಿಲಯ ಸ್ಥಾಪನೆ: ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ೨೦೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಾಲೆ ಸೌಲಭ್ಯವಿದ್ದು, ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ನಿಗಮಗಳ ಅಧ್ಯಕ್ಷರಿಗೆ ಸೌಲಭ್ಯ ವಿತರಣೆ ನೇರ ಅವಕಾಶ ನೀಡಬೇಕು ಎಂದು ಸಿಎಂಗೆ ಕೋರಲಾಗಿದೆ ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳುಂಕೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ, ತಾಲೂಕು ಅಧಿಕಾರಿ ಲಘಮಣ ಇದ್ದರು.