ಆನೇಕಲ್: ಭೂಸ್ವಾಧೀನ ಕೈಬಿಡುವಂತೆ ಆಗ್ರಹಿಸಿ ಇಗ್ಗಲೂರು ರೈತರು ಗ್ರಾಮದಲ್ಲಿ ವಿಷದ ಬಾಟಲಿಗಳನ್ನು ಹಿಡಿದು ಕೆಐಎಡಿಬಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಇಗ್ಗಲೂರಿನಲ್ಲಿ ಖಾಸಗಿ ಸಂಸ್ಥೆಯ ಮುಖಾಂತರ ಕೆಐಎಬಿಡಿ ಇಲಾಖೆ ಸಹಯೋಗದಲ್ಲಿ ರೈತರ ಜಮೀನುಗಳನ್ನು 1996ರಲ್ಲಿ ಸರ್ವೇ ನಂ 84/3ರಲ್ಲಿ 15 ಎಕರೆ ಪೈಕಿ ಸುಮಾರು 11 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ಉಳಿದ ಮೂರೂವರೆ ಎಕರೆ 36 ಗುಂಟೆ ಜಾಗ ವಶಪಡಿಸಿಕೊಳ್ಳಲು ಮುಂದಾದಾಗ ರೈತರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಕೆಐಎಬಿಡಿ ಅಧಿಕಾರಿ ವಿಜಯಕುಮಾರ್ ತಂಡ ಗುರುವಾರ ಜೆಸಿಬಿ ಮುಖಾಂತರ ತೆರವಿಗೆ ಮುಂದಾದಾಗ ರೈತರು ತಡೆಹಿಡಿದು ಪ್ರತಿಭಟಿಸಿದರು. ನಮಗೆ ನಮ್ಮ ಜಮೀನುಗಳನ್ನು ಬಿಡುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಜಮೀನು ಮಾಲೀಕ ಬಾಲರಾಜು ಮಾತನಾಡಿ, ಈಗಾಗಲೇ ಕೆಲವು ರೈತರು ತೀರಿಕೊಂಡಿದ್ದು ಅವರ ಹೆಸರಿನಲ್ಲಿ ಅಧಿಕಾರಿಗಳು ನೋಟಿಫಿಕೇಶನ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಸ್ಥಳೀಯ ರೈತರ ಜತೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಣೆ ಮಾಡದೆ ಬೆಂಗಳೂರಿನ ಕಚೇರಿಯಲ್ಲಿ ಕುಳಿತು ಪ್ರಕ್ರಿಯೆಗಳನ್ನು ಮುಗಿಸಿ, ಕೊನೆಯ ಹಂತದಲ್ಲಿ ಇಲ್ಲಿಗೆ ಬಂದು ಜಮೀನುಗಳನ್ನು ವಶಕ್ಕೆ ಪಡೆಯಲು ಬಂದಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ರೈತ ಮುಖಂಡ ವೆಂಕಟೇಶ್ ಮಾತನಾಡಿ, ಭೂಸ್ವಾಧೀನ ಮಾಡುವ ಸಂದರ್ಭದಲ್ಲಿ ಹಿಮತ್‌ಸಿಂಗ್ ಸೈಡೇಕಾ ಲಿಮಿಟೆಡ್ ಖಾಸಗಿ ಸಂಸ್ಥೆಯವರು ನಮಗೆ ಈ ಜಮೀನು ಬೇಡ ಎಂದರು. ಲಿಖಿತ ಪತ್ರದ ಮೂಲಕವೂ ಬರೆದುಕೊಟ್ಟಿದ್ದರು. ಆದರೂ ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ರೈತರ ಜಮೀನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದರು.
ರೈತರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಸ್ಥಳಕ್ಕೆ ಬಂದ ಅಧಿಕಾರಿಗಳು, ಬೆಂಗಳೂರಿನ ಕಚೇರಿಗೆ ಆಗಮಿಸಿ ಬಂದು ಚರ್ಚಿಸಿ, ಆ ನಂತರ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.