ಸಂತೋಷ ವೈದ್ಯ ಹುಬ್ಬಳ್ಳಿ
ನಗರದ ಉಣಕಲ್ ಕ್ರಾಸ್ನಿಂದ ಸಾಯಿನಗರ ವೃತ್ತ-ಬಿಆರ್ಟಿಎಸ್ ರಸ್ತೆ ನಂ. 4ರ ವರೆಗೆ ಪ್ರಸ್ತಾವಿತ 18 ಮೀ. ರಸ್ತೆ ನಿರ್ವಣಕ್ಕಾಗಿ ಸ್ವಾಧೀನಕ್ಕೊಳಪಡುವ ಜಮೀನಿನ ಮಾಲೀಕರಿಗೆ ನಿಗದಿಪಡಿಸಿರುವ ಒಟ್ಟು ಪರಿಹಾರ ಮೊತ್ತ 9,31,11,499 ರೂ. ಗಳೆಂದು ಅಂದಾಜಿಸಲಾಗಿದೆ. ಈ ನಡುವೆ 18 ಮೀ. ನಷ್ಟು ಅಗಲದ ರಸ್ತೆಗೆ ವಿರೋಧ ವ್ಯಕ್ತಪಡಿಸಿರುವ ಭೂ ಮಾಲೀಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
160ಕ್ಕೂ ಅಧಿಕ ಭೂ ಮಾಲೀಕರಲ್ಲಿ ಕೇವಲ 6 ಜನ ಮಾತ್ರ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದ್ದು, ಉಳಿದವರು ಒಪ್ಪಿಗೆ ಸೂಚಿಸಿಲ್ಲ. ಬಹಳಷ್ಟು ಭೂ ಮಾಲೀಕರು ಒಪ್ಪಿಗೆ ಪತ್ರದ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ವಲಯ ಕಚೇರಿ 5ರಿಂದ ಭೂ ಮಾಲೀಕರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಲಾಗುತ್ತಿದೆ. ಆದರೆ, ಈ ಒಪ್ಪಿಗೆ ಪತ್ರವನ್ನು ಯಾರು ನೀಡುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಒಪ್ಪಿಗೆ ಪತ್ರದಲ್ಲಿ ಯಾವ ಕಚೇರಿಯ ವಿಳಾಸವೂ ಇಲ್ಲ. ಧಾರವಾಡ ಉಪ ವಿಭಾಗಾಧಿಕಾರಿ ಕಚೇರಿಯು ಭೂ ಸ್ವಾಧೀನ ಪ್ರಕ್ರಿಯೆ ಜರುಗಿಸುತ್ತಿದೆ. ಈ ಕಚೇರಿಯ ಹೆಸರು ಒಪ್ಪಿಗೆ ಪತ್ರದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಮೇಲಾಗಿ ನನ್ನ ಮಾಲೀಕತ್ವದ ಜಮೀನಿಗೆ ನನಗೆ (ಭೂಮಾಲೀಕರು) ಒಪ್ಪಿಗೆಯಾದ ದರ ನೀಡಿದಲ್ಲಿ ಮಹಾನಗರ ಪಾಲಿಕೆಗೆ ಮಾರಾಟ ಮಾಡಲು ನನ್ನ ಒಪ್ಪಿಗೆ ಇರುತ್ತದೆ ಎಂದು ಬರೆಯಲಾಗಿದೆ.
‘ಧಾರವಾಡ ಎಸಿ ಕಚೇರಿಯು ಭೂ ಸ್ವಾಧೀನ ಪ್ರಕ್ರಿಯೆ ಜರುಗಿಸುತ್ತಿದೆ. ಅವರು ನೀಡಿದ ಸ್ವರೂಪದಲ್ಲಿಯೇ ಒಪ್ಪಿಗೆ ಪತ್ರವನ್ನು ಮುದ್ರಿಸಿ ಭೂ ಮಾಲೀಕರಿಗೆ ನೀಡಿದ್ದೇವೆ. ಇಲ್ಲಿಯವರೆಗೆ 6 ಜನ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕೊಟ್ಟಿದ್ದಾರೆ. ಉಳಿದವರು ಒಪ್ಪಿಗೆ ಪತ್ರವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ’ ಎಂದು ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ಆನಂದಕುಮಾರ ಜಳಕಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಬೆಲೆ ನಿಗದಿ: ಈ ರಸ್ತೆಯ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭೂ ಬೆಲೆಯನ್ನು ನಿಗದಿಪಡಿಸಲು ಆಗಸ್ಟ್ 7ರಂದು ಧಾರವಾಡ ಕೃಷಿ ವಿವಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ತರುವಾಯ ಖುಲ್ಲಾ ಜಾಗಕ್ಕೆ ಪ್ರತಿ ಚದರ ಮೀಟರ್ಗೆ 9124 ರೂ., ಖಾಸಗಿ ಆರ್ಸಿಸಿ ಮನೆ ನೆಲ ಮಹಡಿ ಪ್ರತಿ ಚ.ಮೀ. ಗೆ 18,183 ರೂ., ಮೇಲ್ಮಹಡಿಗೆ 16,298 ರೂ., ಎಸಿ ಶೀಟಿನ ಮನೆಗೆ ಪ್ರತಿ ಚ.ಮೀ.ಗೆ
11,518 ರೂ. ಬೆಲೆ ಅಂತಿಮಗೊಳಿಸಲಾಗಿದೆ. ಜತೆಗೆ ಹೊಸ ಭೂಸ್ವಾಧೀನ ಕಾಯ್ದೆ-2013ರನ್ವಯ ಶೇ. 100ರಷ್ಟು ನಷ್ಟ ಭರ್ತಿ ಸೇರಿಸಿ ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ. ಒಟ್ಟು 3985.75 ಚ.ಮೀ. ನಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಲು 9.31 ಕೋ. ರೂ. ಪರಿಹಾರ ಮೊತ್ತವೆಂದು ಅಂದಾಜಿಸಲಾಗಿದೆ. ಪರಿಹಾರ ಮೊತ್ತ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ.
ಭೂ ಸ್ವಾಧೀನ ಏಕೆ?
ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಬಂಕಾಪುರ ಚೌಕ ಹಾಗೂ ಉಣಕಲ್-ಕಮರಿಪೇಟೆ ನಡುವೆ ಒಂದಿಂಚೂ ಭೂಮಿ ಸ್ವಾಧೀನ ಪಡಿಸಿಕೊಳ್ಳದೇ ಕಾಂಕ್ರೀಟ್ ರಸ್ತೆ ನಿರ್ವಿುಸಲಾಗಿದೆ. ಇಲ್ಲಿ ಭೂ ಸ್ವಾಧೀನ ಏಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ನಗರದ ಸ್ಟೇಶನ್ ರಸ್ತೆ, ಕೊಪ್ಪಿಕರ್ ರಸ್ತೆ, ದಾಜಿಬಾನ ಪೇಟೆ, ಮೂರುಸಾವಿರ ಮಠದ ರಸ್ತೆ, ಕೊಯಿನ್ ರಸ್ತೆ ಹಾಗೂ ಮರಾಠಾ ಗಲ್ಲಿ ರಸ್ತೆಗಳ ಅಗಲೀಕರಣ ಮಾಡುವುದನ್ನು ಬಿಟ್ಟು ಸಾಯಿನಗರ ರಸ್ತೆಯ ಅಗಲೀಕರಣಕ್ಕೆ ಇಷ್ಟೊಂದು ಉತ್ಸಾಹ ಹಾಗೂ ಮಹತ್ವ ನೀಡುತ್ತಿರುವುದು ಏಕೆ? ಕೃಷಿ ವಿವಿಯಲ್ಲಿ ನಡೆದ ಸಭೆಯ ನಿರ್ಧಾರದಂತೆ 12 ಮೀ. ಅಗಲದ ರಸ್ತೆ ನಿರ್ವಿುಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಇದನ್ನೆಲ್ಲ ಗಾಳಿಗೆ ತೂರಿ 18 ಮೀ. ರಸ್ತೆಯನ್ನೇ ನಿರ್ವಿುಸಲು ಮುಂದಾದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಸ್ಥಳೀಯರಾದ ಶಂಕ್ರಪ್ಪ ಕಂಠಿಗಾವಿ ತಿಳಿಸಿದ್ದಾರೆ.