ಅರಸೀಕೆರೆ: ಅಭಿವೃದ್ಧಿ ಹೆಸರಿನಲ್ಲಿ ರೈತರಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಸರ್ಕಾರಗಳು ನ್ಯಾಯಯುತ ಪರಿಹಾರದ ಜತೆಗೆ ಭೂ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ನೀಡಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.
ತಾಲೂಕಿನ ಗಂಡಸಿ ಎಪಿಎಂಸಿ ಉಪ ಪ್ರಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾ ಮತ್ತು ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಭಾರತ್ ಮಾಲಾ ಪರಿಯೋಜನೆಯಡಿ ಭಾರತದಲ್ಲಿ ಸರಕು ಸಾಗಣೆಯ ದಕ್ಷತೆ ಸುಧಾರಿಸಲು ಆರ್ಥಿಕ ಕಾರಿಡಾರ್ ಮಾರ್ಗದ 114 ಕಿ.ಮೀ. ಉದ್ದದ ಚತುಷ್ಪದ ರಾಷ್ಟ್ರೀಯ ಹೆದ್ದಾರಿಯನ್ನು 4801 ಕೋಟಿ ರೂ. ವೆಚ್ಚದಲ್ಲಿ ಹಾಸನ, ಹುಳಿಯಾರು, ಹಿರಿಯೂರಿನವರೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಗ್ರೀನ್‌ಫೀಲ್ಡ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿಗೆ ಜಮೀನು ನೀಡಿರುವ ರೈತರಿಗೆ ಪರಿಹಾರ, ಉದ್ಯೋಗದ ಜತೆಗೆ ಮೂಲ ಸೌಕರ್ಯಗಳನ್ನು ಕಲಿಸಿಕೊಡಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿಯು ಗ್ರೀನ್‌ಫೀಲ್ಡ್ ಚತುಷ್ಪಥ ರಸ್ತೆ ಹಾಸನ, ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಹಿರಿಯೂರು ಮಾರ್ಗದಲ್ಲಿ 3 ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಲಿದೆ. ಜತೆಗೆ ಸರಕು ಸಾಗಣೆಯ ದಕ್ಷತೆಯನ್ನು ಸುಧಾರಿಸಲು ಹಾಗೂ ರಸ್ತೆ ಅಪಘಾತದಿಂದ ಉಂಟಾಗುವ ಸಾವು-ನೋವುಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದೂರದ ಮಹಾನಗರಗಳನ್ನು ಸಂಪರ್ಕಿಸಲು ಹೆಚ್ಚಿನ ಸಹಕಾರಿಯಾಗಲಿದೆ ಎಂದು ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ವಿವರಿಸಿದರು.
ಮೈಸೂರು ವಲಯ ಪರಿಸರ ಮಾಲಿನ್ಯ ಮಂಡಲಿ ಹಿರಿಯ ಅಧಿಕಾರಿ ಡಾ.ಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅನ್ಸಾರಿ, ವಿಶೇಷ ಭೂಸ್ವಾಧೀನಾಧಿಕಾರಿ ನಟೇಶ್, ತಹಸೀಲ್ದಾರ್ ಎ.ಜಿ.ಸಂತೋಷ್ ಕುಮಾರ್ ಮತ್ತಿತರರು ಹಾಜರಿದ್ದರು.