ಚಾಮರಾಜನಗರ: ಭೂಮಿಯ ಭವಿಷ್ಯಕ್ಕಾಗಿ ನೈಸರ್ಗಿಕ ಹಾದಿ ಹಿಡಿದು ಇಳಿ ವಯಸ್ಸಿನಲ್ಲೂ ಚೈತನ್ಯದ ಚಿಲುಮೆಯಂತೆ ಕೃಷಿ ಮಾಡುತ್ತಿರುವ ರೈತರೊಬ್ಬರು ಮಾದರಿ ಬೇಸಾಯ ಮಾಡುತ್ತಿದ್ದಾರೆ.
ನಗರದ 17ನೇ ವಾರ್ಡ್‌ನ ನಿವಾಸಿ ಎ.ನಂಜುಂಡಶೆಟ್ಟಿ(ದೇವಣ್ಣ) ಕಾಡಳ್ಳಿ ಗ್ರಾಮದಲ್ಲಿ 6 ಎಕರೆ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಭೂಮಿಯನ್ನು ಗುತ್ತಿಗೆ ನೀಡಿ ರಾಸಾಯನಿಕ ಬಳಕೆ ಮಾಡದ್ದರಿಂದ ಮಣ್ಣಿನ ಲವತ್ತೆ ಕಡಿಮೆಯಾಗಿತ್ತು. 3 ವರ್ಷಗಳಿಂದ ದೇವಣ್ಣ ಅವರೇ ಕೃಷಿಗಿಳಿದು ಭವಿಷ್ಯಕ್ಕಾಗಿ ಭೂಮಿ ಉಳಿಸಲು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿದರು. ದೇವಣ್ಣ 63 ವರ್ಷ ವಯಸ್ಸಿನಲ್ಲೂ ಯುವಕರಿಗೆ ಸರಿಸಮಾನವಾಗಿ ಕೃಷಿ ಮಾಡುತ್ತಿದ್ದಾರೆ. ಈ ಶ್ರಮದ ಹಿಂದಿನ ಲ ತೋಟದಲ್ಲಿ ಎದ್ದು ಕಾಣುತ್ತಿದೆ.
ಏನೇನು ಬೆಳೆಗಳಿವೆ?: ರೈತ ದೇವಣ್ಣ ಅವರ ತೋಟದಲ್ಲಿ ಮಿಶ್ರ ಬೆಳೆಗಳು ನೆಲೆ. ಬಿಳಿ ಬದನೆ, 1400 ಬಾಳೆ(200 ಪಚ್ಚಬಾಳೆ), 1500 ಅಡಿಕೆ, 100 ತೆಂಗು, 4 ಸಪೋಟ(ವಿವಿಧ ಬಗೆ), 4 ಸೀಬೆ, 10 ಪರಂಗಿ(ವಿವಿಧ ತಳಿ), 50 ತೇಗ, 5 ಬೇವು, 5 ಹೆಬ್ಬೇವು ಬೆಳೆದಿದ್ದಾರೆ. ಈ ಹಿಂದೆ ಟಮೊಟೊ, ಮೆಣಸಿನಕಾಯಿ, ಬೂದುಗುಂಬಳ ಹಾಕಿದ್ದರು. 10 ಕುರಿಗಳನ್ನೂ ಸಹ ಸಾಕಿದ್ದಾರೆ.
ಚೆಂಡು ಹೂಗಳ ತೋಟ: ತೋಟದಲ್ಲಿ ಚೆಂಡುಹೂಗಳನ್ನು ಬೆಳೆಯಲಾಗಿದೆ. ಹೂ ಗಿಡಗಳ ಬದುವಿನಲ್ಲಿ ಟಮೊಟೊ ಹಾಕಿದ್ದಾರೆ. ದೀಪಾವಳಿ ಹಬ್ಬ ಹತ್ತಿರವಿದ್ದು, ಹೂವಿಗೆ ಉತ್ತಮ ಬೆಲೆ ಬರುವುದರಿಂದ ರೈತ ದೇವಣ್ಣ ಅವರಿಗೆ ಚೆಂಡು ಹೂ ಲಾಭ ತಂದುಕೊಡಬಹುದೆಂಬ ನಿರೀಕ್ಷೆ ಇದೆ. ಇದು ಕೇವಲ ಒಂದೇ ಬೆಳೆಗೆ ಸೀಮಿತವಾಗದೆ ಬೇರೆ ಬೇರೆ ಬೆಳಗಳನ್ನೂ ಬೆಳೆದರೆ ಸಕಾಲದ ಅಗತ್ಯ ವಸ್ತುವಿನ ಬೆಲೆ ಏರಿಕೆಯ ನೀತಿಗೆ ತಕ್ಕಂತೆ ಲಾಭ ಗಳಿಸಲು ಸಾಧ್ಯ ಎನ್ನುವುದಕ್ಕೆ ಉತ್ತಮ ಉದಾರಹಣೆಯಾಗಿದೆ.
ಸಾವಯವ ದ್ರಾವಣ ತಯಾರಿಕೆ:
ರೈತ ದೇವಣ್ಣ ಸಾವಯವ ದ್ರವ್ಯ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಈ ಸಾಂಪ್ರದಾಯಿಕ ವಿಧಾನವು ಹಿಂದಿನ ನಾಟಿ ಮತ್ತು ನೈಸರ್ಗಿಕ ವಿಧಾನಗಳನ್ನು ನೆನಪು ಮಾಡುತ್ತಿವೆ. ಬದನೆ, ಬಾಳೆ, ಅಡಿಕೆ ಮತ್ತು ಇತರೆ ಬೆಳೆಗಳಿಗೆ ರೋಗ ಬಾರದಿರಲು 15 ಲೀಟರ್ ನೀರಿಗೆ 1.5 ಗ್ರಾಂ ಇಂಗು ಬೆರೆಸಿ ಸಿಂಪಡಣೆ ಮಾಡುತ್ತಾರೆ. ಅಲ್ಲದೇ, 200 ಲೀಟರ್ ನೀರಿಗೆ 200 ಗ್ರಾಂ ನೆಲ್ಲಿಕಾಯಿ ಪುಡಿ, ನಾಟಿ ಹಸುವಿನ ಮಜ್ಜಿಗೆ ಬೆರೆಸಿ ಮೂರು ದಿನಗಳ ಬಳಿಕ ಕಲಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಈ ವಿಧಾನದಿಂದ ಬೆಳೆಗಳಿಗೆ ಅಂಟಿರುವ ರೋಗಬಾಧೆಯನ್ನು ತಡೆಯಲು ಸಾಧ್ಯ. ರಾಸಾಯನಿಕ ಔಷಧಿಗಳನ್ನು ಬಳಕೆ ಮಾಡುವ ಅಗತ್ಯವೂ ಬರುವುದಿಲ್ಲ ಎಂದು ರೈತ ದೇವಣ್ಣ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಇದರೊಂದಿಗೆ ಬೆಳೆಗಳ ಬೆಳವಣಿಗೆಗಾಗಿಯೂ ಸಹ ಈ ರೀತಿಯ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ಸಗಣಿ, ಗಂಜಲ ಕಡಲೆಕಾಯಿ ಹಿಂಡಿ ಹಾಕಿ 6 ದಿನಗಳ ಬಳಿಕ ಬೆಳೆಗಳಿಗೆ ನೀಡುತ್ತಿದ್ದಾರೆ.
ನೋಟ ಸೆಳೆಯುವ ತೋಟ:
ದೇವಣ್ಣ ಅವರ ತೋಟ ನೋಟದಲ್ಲೇ ಸೆಳೆಯುತ್ತದೆ. ಬಾಳೆ ಗಿಡಗಳು ಗೊನೆ ಬಿಟ್ಟಿವೆ. ಭಾರಿ ಗಾತ್ರದ ಗೊನೆಗಳು ಮೊದಲ ದರ್ಜೆಯ ಬೆಲೆಯನ್ನು ಹೊಂದಿವೆ. ಅದರಲ್ಲೂ ರಾಸಾಯನಿಕ ಮುಕ್ತ ಬಾಳೆ ಗ್ರಾಹಕರ ಆರೋಗ್ಯಕ್ಕೂ ಪೂರಕವಾಗಿವೆ. ಅಡಿಕೆ ಗಿಡಗಳು ವೇಗವಾಗಿ ಬೆಳೆಯುತ್ತಿವೆ. ಚೆಂಡು ಹೂ, ಸಪೋಟ, ಸೀಬೆ ಮಣ್ಣಿನ ಲವತ್ತತೆಗೆ ಅನುಸಾರವಾಗಿ ಲ ಕೊಡುತ್ತಿವೆ. ಕಳೆಯನ್ನು ತೆಗೆಯದೆ ಅಲ್ಲೇ ಕೊಳೆಸಿ ಭೂಮಿಗೆ ಗೊಬ್ಬರ ಮಾಡಲಾಗುತ್ತಿದೆ. ಎರೆಹುಳು ಗೊಬ್ಬರವನ್ನೂ ತಯಾರಿಸಿ ಬೆಳೆಗಳಿಗೆ ನೀಡಲಾಗುತ್ತಿದೆ. ಮೃದುವಾದ ಮಣ್ಣು, ಹಿತವಾದ ವಾತಾವರಣ ತೋಟದಲ್ಲಿ ಸಾವಯವ ಪದ್ಧತಿಯ ಅನುಷ್ಠಾನವನ್ನು ಒತ್ತಿ ಹೇಳುತ್ತಿದೆ.
ಕೃಷಿಯ ಮೇಲೆ ಅಪಾರ ಆಸಕ್ತಿ:
ದೇವಣ್ಣ ಅವರಿಗೆ ಕೃಷಿಯ ಮೇಲೆ ಇರುವ ಆಸಕ್ತಿ ಅಪಾರವಾದದ್ದು. ಕೃಷಿ ತರಬೇತಿಗಳಲ್ಲಿ ಭಾಗವಹಿಸುವುದು, ಪ್ರಗತಿ ಪರ ರೈತರ ಜಮೀನುಗಳಿಗೆ ಭೇಟಿ, ತನ್ನ ತೋಟಕ್ಕೆ ಬರುವ ರೈತರಿಗೆ ಪ್ರಾತ್ಯಕ್ಷಿಕೆ ನೀಡುವುದೂ ಸೇರಿದಂತೆ ಸದಾಕಾಲ ಕೃಷಿಯನ್ನೇ ದೇವಣ್ಣ ಧ್ಯಾನಿಸುತ್ತಿದ್ದಾರೆ. ಗಂಗಾ ಕಲ್ಯಾಣದಿಂದ ಕೊಳವೆ ಬಾವಿ, ಸಹಾಯಧನದಲ್ಲಿ ಹನಿ ನೀರಾವರಿ ಅಳವಡಿಕೆ ಮಾಡಿಕೊಂಡಿದ್ದಾರೆ.
ಉತ್ಪಾದಕ ಮತ್ತು ಮಾರಾಟಗಾರ: ರೈತರು ಉತ್ಪಾದಕರಷ್ಟೇ ಆದರೆ ಸಾಲದು ಮಾರಾಟಗಾರರೂ ಆಗಬೇಕೆಂಬ ಮಾತಿನಂತೆ ರೈತ ದೇವಣ್ಣ ಉತ್ಪಾದಕ ಮತ್ತು ಮಾರಾಟಗಾರರೂ ಆಗಿದ್ದಾರೆ. ಬಾಳೆ ಹಣ್ಣು, ಟಮೊಟೊ ಇನ್ನಿತರೆ ಬೆಳೆಗಳನ್ನು ರೈತ ಸಂಘದ ನಮ್ದು ಮಾರಾಟ ಕೇಂದ್ರಕ್ಕೆ ತಂದು ತಾವೇ ಮಾರಾಟ ಮಾಡುತ್ತಿದ್ದಾರೆ. ನಾಟಿ ತಳಿಯ ಎರಡು ಹಸುಗಳನ್ನು ಸಾಕಿದ್ದು, ಇದರ ಹಾಲು, ಬೆಣ್ಣೆ, ತುಪ್ಪ, ಮಜ್ಜಿಗೆಯನ್ನೂ ಸಹ ಮಾರಾಟ ಮಾಡುತ್ತಿದ್ದಾರೆ.
ಜಮೀನಿನಲ್ಲಿ ಖುದ್ದಾಗಿ ನಿಂತು ಕೆಲಸ ಮಾಡಬೇಕು. ಕೆಲವರಿಗೆ ಇದು ಸಾಧ್ಯವಾಗಲ್ಲ. ಇಂತವರು ರಾಸಾಯನಿಕ ಕೃಷಿ ಮಾಡುತ್ತಾರೆ. ಸಾವಯವ ಪದ್ಧತಿಲ್ಲಿ ಶ್ರಮವಿದೆ. ತಕ್ಕಂತೆಯೇ ಲಿತಾಂಶವೂ ಸಿಗುತ್ತದೆ. ನಾವು ಬೆಳೆದ ಹಣ್ಣು, ಸೊಪ್ಪು, ತರಕಾರಿ ಖರೀದಿ ಮಾಡುವ ಗ್ರಾಹಕರಿಗೆ ವಿಷ ಮುಕ್ತ ಆಹಾರ ಮಾರಾಟ ಮಾಡಿದ ತೃಪ್ತಿಯೂ ಅಡಗಿದೆ. ಎ.ನಂಜುಂಡಶೆಟ್ಟಿ(ದೇವಣ್ಣ), ಮಾದರಿ ಕೃಷಿಕ, ಕಾಡಳ್ಳಿ