ಬಾಗಲಕೋಟೆ: ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾಯವಯ ಮೇಳದ ಅಂಗವಾಗಿ ಹಮ್ಮಿಕೊಂಡ ಸಿರಿಧಾನ್ಯ ನಡಿಗೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿ.ಪಂ ಸಿಇಓ ಶಶೀಧರ ಕುರೇರ ಜಂಟಿಯಾಗಿ ಗುರುವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಎಲ್ಲ ವಯಸ್ಸಿನವರು ಸಿರಿಧಾನ್ಯಗಳನ್ನು ಬಳಕೆ ಮಾಡುವದರಿಂದ ಹಲವಾರು ರೋಗಗಳಿಂದ ದೂರವಿರಲು ಸಾಧ್ಯವಿದೆ. ಉತ್ತಮ ಸಮಾಜಕ್ಕಾಗಿ ಸಿರಿಧಾನ್ಯ ಆಹಾರ ಬಳಕೆ ಅವಶ್ಯವಾಗಿದೆ. ಸಿರಿಧಾನ್ಯಗಳನ್ನು ಬಳಕೆ ಮಾಡುವದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿದೆ. ಸಾವಯುವ ಪದ್ದತಿಯಲ್ಲಿ ಸಿರಿಧಾನ್ಯ ಬೆಳೆಯುವದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಸಿರಿಧಾನ್ಯಗಳ ಹೆಚ್ಚೆಚ್ಚು ಬಳಕೆ ಮಾಡುವದರಿಂದ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ಮಾತನಾಡಿ ವಿಶ್ವ ಸಂಸ್ಥೆಯು 2023ನ್ನು ವಿಶ್ವ ಸಿರಿಧಾನ್ಯ ದಿನವನ್ನಾಗಿ ಆಚರಿಸುತ್ತಿದ್ದು, ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಇವುಗಳ ಬಳಕೆಯಿಂದ ಹಲವು ರೋಗಳಿಂದ ಮುಕ್ತರಾಗಬಹುದು ಎಂದು ತಿಳಿಸಿದರು.
ಸಿರಿಧಾನ್ಯ ನಡಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಪೊಲೀಸ್ ಪ್ಯಾಲೇಸ್, ಎಲ್.ಐ.ಸಿ ವೃತ್ತ, ಎಸ್.ಬಿ.ಐ ಬ್ಯಾಂಕ್, ಜಿಲ್ಲಾ ಆಸ್ಪತ್ರೆ, ಕಾಳಿದಾಸ ಸರ್ಕಲ್ ಮಾರ್ಗವಾಗಿ ವಿದ್ಯಾಗಿರಿ ಇಂಜಿನೀಯರಿಂಗ್ ವೃತ್ತಕ್ಕೆ ಮುಕ್ತಾಯಗೊಂಡಿತು. ವಿದ್ಯಾಗಿರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸಿರಿಧಾನ್ಯಗಳ ಬಳಕೆ, ಅವುಗಳ ಮಹತ್ವ ಮತ್ತು ಸಾವಯವ ಕೃಷಿ ಬಗ್ಗೆ ಒತ್ತು ನೀಡಲು ಉತ್ತೇಜಿಸಲಾಯಿತು. ನಡಿಗೆಯಲ್ಲಿ 25 ಸೈಕ್ಲಿಸ್ಟಗಳು, ಎತ್ತಿನ ಬಂಡಿಗಳು, ಕಿವುಡ ಮತ್ತು ಮೂಲಕ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನರ್ಸಿಂಗ್ ವಿದ್ಯಾರ್ಥಿಗಳು ಮಾರ್ಗದುದ್ದಕ್ಕೂ ಸಿರಿಧಾನ್ಯಗಳ ಜಾಗೃತಿ ಘೋಷಣೆಗಳನ್ನು ಕೂಗಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಮ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಕೃಷಿ ಇಲಾಖೆಯ ಉಪನಿರ್ದೇಶಕರಾದ ಎಲ್.ಐ.ರೂಢಗಿ, ಕೆ.ಎಸ್.ಅಗಸಿನಾಳ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಪಾಟೀಲ, ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಾದ ಎಸ್.ಬಿ.ಪಾಟೀಲ, ಅಂಗಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.