ಗುಂಡ್ಲುಪೇಟೆ: ಹಕ್ಕುಪತ್ರ ನೀಡಿರುವ ಭೂಮಿಯನ್ನು ರೈತರಿಗೆ ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಮಂಗಳವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಗರ್ ಹುಕುಂ ಸಮಿತಿಯ ಸಭೆ ಸಂದರ್ಭದಲ್ಲಿ ತಮ್ಮ ಜಮೀನುಗಳಲ್ಲಿ ಅರಣ್ಯ ಇಲಾಖೆ ಕಲ್ಲು ನೆಟ್ಟಿದೆ ಎಂದು ದೂರು ನೀಡಿದ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಗೆ ಅರಣ್ಯ ಇಲಾಖೆ ಸರ್ವೇ ನಡೆಸಿ ಅರಣ್ಯ ಭೂಮಿ ಒತ್ತುವರಿ ಗುರುತಿಸಿ ಕಲ್ಲು ನೆಟ್ಟಿದೆ. ಇದರಲ್ಲಿ ಹಲವಾರು ರೈತರ ಜಮೀನುಗಳು ಸೇರಿದ್ದರೂ ಬೆಳೆ ಬೆಳೆಯಲು ಅಡ್ಡಿಪಡಿಸುತ್ತಿಲ್ಲ. 1978ಕ್ಕೂ ಹಿಂದೆ ಕಾಡಂಚಿನ ಭೂಮಿಗಳ ಹಕ್ಕುಪತ್ರ ನೀಡಿರುವ ಭೂಮಿಯನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರದಿಂದ ಜಂಟಿ ಸರ್ವೇ ನಡೆಸಿ ಇತ್ತೀಚೆಗೆ ಒತ್ತುವರಿಯಾದ ಗೋಮಾಳ ಮತ್ತು ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯಲು ಬಹುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಸಮಿತಿಯ ಉಪಾಧ್ಯಕ್ಷ ಪಿ.ಮಹದೇವಪ್ಪ, ಸದಸ್ಯರಾದ ನಾಗರಾಜು, ಕಲಾವತಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.