ಹನೂರು: ಸರ್ಕಾರದಿಂದ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಹಕ್ಕುಪತ್ರ ನೀಡುವಲ್ಲಿ ಹನೂರು ಕ್ಷೇತ್ರ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇದು ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಶಾಸಕ ಆರ್.ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹನೂರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸವಿದ್ದಾರೆ. ಆದರೆ ಈ ಸಮುದಾಯಕ್ಕೆ ಭವನ ಇರಲಿಲ್ಲ. ಇದರಿಂದ ಸಭೆ- ಸಮಾರಂಭ, ಮದುವೆ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸಲು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಗಿರಿಜನ ಮುಖಂಡರು ಸಮುದಾಯ ಭವನ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಈ ದಿಸೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ 137 ಸಮುದಾಯ ಭವನಗಳು ಮಂಜೂರಾಗಿದ್ದವು. ಈ ಪೈಕಿ ಆಣೆಹೊಲ, ಅಂಡೆಕುರುಬರದೊಡ್ಡಿ, ರಾಚಪ್ಪಾಜಿನಗರ ಆಲಂಬಾಡಿ ಸೇರಿದಂತೆ 15 ಗಿರಿಜನರ ಪೋಡಿಗಳಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ ಎಂದರು.
ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ವರ್ಗದ ಜನರು ವಾಸಿಸುವ ಶೇ.80ರಷ್ಟು ಕಾಲನಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ 1,500 ಗಿರಿಜನರಿಗೆ 2,865 ಎಕರೆ ಭೂಮಿ ಹಕ್ಕುಪತ್ರ ವಿತರಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕ್ಷೇತ್ರದ 30 ಸಾವಿರ ಜನರಿಗೆ ಉಚಿತವಾಗಿ ಗ್ಯಾಸ್ ವಿತರಿಸಲಾಗಿದೆ. ಆದರೆ ಬಿಜೆಪಿ ಸರ್ಕಾರ ಕಳೆದ 4 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ ಎಂದರು.
2.75 ಕೋಟಿ ರೂ. ವೆಚ್ಚ: ಪಾಳ್ಯ ಗ್ರಾಮದಲ್ಲಿ 1.28 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ, ಉದ್ದಟ್ಟಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಗಿರಿಜನರ ಸಮುದಾಯ ಭವನ, ಟಿಬೆಟ್ ಕ್ಯಾಂಪ್, ಬೂದಿಪಡಗದಲ್ಲಿ ತಲಾ 20 ಲಕ್ಷ ರೂ., ಜೀರಿಗೆಗದ್ದೆ, ಮಾವತ್ತೂರು, ಉದ್ದಟ್ಟಿ ಹಾಗೂ ಹಿರಿಯಂಬಲ ಗಿರಿಜನರ ಪೋಡಿನಲ್ಲಿ ತಲಾ 10 ಲಕ್ಷ ರೂ.ನಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಸೇರಿದಂತೆ ಒಟ್ಟು 2.75 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಲೊಕ್ಕನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉಪ್ಪಾರ ಸಮುದಾಯ ಭವನವನ್ನು ಉದ್ಘಾಟಿಸಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯ್ಕ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್, ಗ್ರಾಪಂ ಸದಸ್ಯರಾದ ಶಾಂತಮಣಿ, ಮಧುಮಿತ, ಮೀನಾಕ್ಷಿ, ಮಾಜಿ ಅಧ್ಯಕ್ಷ ರಂಗಶೆಟ್ಟಿ, ಪಿಡಿಒ ರಘುರಾಮ್, ಕೆಆರ್‌ಐಡಿಎಲ್ ಎಇ ಶೋಭಾ, ಮುಖಂಡರಾದ ಜಗದೀಶ್, ಗುರುಮಲ್ಲಪ್ಪ, ಪುಟ್ಟರಾಜು, ಸಿದ್ದರಾಜು, ವೇಲು, ಶಿವಣ್ಣ, ಮುತ್ತು, ಮಲ್ಲಯ್ಯ, ಅಂಕರಾಜು, ಅಶೋಕ್, ಮಾದೇಶ್, ರಂಗಸ್ವಾಮಿ, ರಾಚಶೆಟ್ಟಿ, ಶಿವರಾಮಶೆಟ್ಟಿ, ನಾಗರಾಜು, ಸಿದ್ಧಶೆಟ್ಟಿ, ರಂಗಮಾದಶೆಟ್ಟಿ ಹಾಜರಿದ್ದರು.