ಹಾಸನ: ಭೂಮಿಯನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದಾಗಬೇಕು ಹಾಗೂ ಎಲ್ಲ ಜೀವಿಗಳಿಗೂ ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಎಂಜಿ ರಸ್ತೆ) ಸಹ ಪ್ರಾಧ್ಯಾಪಕ ಡಾ. ಕೆ. ಬಾಷಾ ತಿಳಿಸಿದರು.
ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಗುರುವಾರ ನಡೆದ ಸಾಮಾಜಿಕ ವ್ಯವಹಾರ ಮತ್ತು ಸೂಕ್ಷ್ಮ ಹಣಕಾಸು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೌತಿಕ ಸಂಪತ್ತು ಅನ್ನುವುದು 300 ವರ್ಷಗಳಿಂದ ಇದೆ. ಆದರೆ ನಿರ್ಗತಿಕರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಅನ್ನುವುದು ವ್ಯಾಪಾರವಾಗಿ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ. ಹಲವಾರು ದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸೇವೆಗಳನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಇದರ ಬಗ್ಗೆ ಹೆಚ್ಚು ಗಮನ ವಹಿಸಿ ಬಡವರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದರು.
ನಮ್ಮ ದೇಶದಲ್ಲಿ ಶೇಕಡ 33ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ವಿದೇಶಿಗಳಲ್ಲಿ ಸೋಶಿಯಲ್ ಬಿಸಿನೆಸ್ ಬಗ್ಗೆ ಹಲವಾರು ರೀತಿಯ ಪ್ರಯೋಗಕ್ಕೆ ಮುಂದಾಗಿವೆ. ನಮ್ಮ ದೇಶದಲ್ಲಿ ಈ ಪರಿಕಲ್ಪನೆ ಆಧಾರವಾಗಿ ಸಮಾಜಕ್ಕೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಲು ಮುಂದಾಗಬೇಕು. ವಿದ್ಯಾರ್ಥಿಗಳು ಬ್ಯಾಂಕ್‌ಗಳು ಹಾಗೂ ಅವುಗಳ ಕಾರ್ಯಗಳ ಬಗ್ಗೆ ಅಪಾರವಾದ ಮಾಹಿತಿಗಳನ್ನು ತಿಳಿದುಕೊಂಡಿರಬೇಕು. ಯಾವುದೇ ಕೆಲಸ ಮಾಡಲು ಕೌಶಲಗಳನ್ನು ಅರಿತಿರಬೇಕು. ಸ್ವತಃ ದುಡಿಯುವ ಮನಸ್ಥಿತಿ ಎಲ್ಲವನ್ನು ನಿಭಾಯಿಸುತ್ತೆನೆಂಬ ಧ್ಯೇಯ ಹೆಣ್ಣು ಮಕ್ಕಳಿಗೆ ಬಲವಾಗಿರಬೇಕು. ಸಮಸ್ಯೆಗಳೊಂದಿಗೆ ಸಂದಾನ ಮಾಡಿಕೊಳ್ಳಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಸಾಮಾಜಿಕ ವ್ಯವಹಾರ ಮತ್ತು ಸೂಕ್ಷ್ಮ ಹಣಕಾಸು ವಿಚಾರ ಎಂಬುದು ವಿಶಾಲವಾದ ಅಧ್ಯಯನವಾಗಿದೆ. ಮಾನವ ಸಂಘಜೀವಿಯಾಗಿದ್ದರೂ ಸಹ ಕೂಡಿ ಬಾಳುವ ಮನೋಭಾವನೆ ಇಲ್ಲ. ಸಾಮಾಜಿಕ ಬದ್ಧತೆ ಇರುವ ಕೆಲವರು ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡಬೇಕು. ಆರ್ಥಿಕ ಸಮಸ್ಯೆಯಿಂದ ಪಾರಾಗಲೂ ಜನರು ಹಣ ತೆಗೆದು ಬೇರೆ ಕಡೆ ಬಂಡವಾಳ ಹೂಡುತ್ತಾರೆ. ಇದರಿಂದ ಸಾಲ ತೀರಿಸಲಾಗದೆ ಸಾಲಗಾರನಾಗುತ್ತಾನೆ. ಸಾಮಾಜಿಕ ವ್ಯವಹಾರ ಮತ್ತು ಸೂಕ್ಷ್ಮ ಹಣಕಾಸು ಅರ್ಥ ಮಾಡಿಕೊಳ್ಳಲು ಕಷ್ಟ ಎನಿಸಿದರು, ನಮ್ಮ ಜೀವನದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಸುರೇಶ್‌ಕುಮಾರ್, ಸಹ ಪ್ರಾಧ್ಯಾಪಕಿ ಡಾ.ಡಿ. ವನಿತಾ, ಐಕ್ಯೂಎಸಿ ಸಂಚಾಲಕ ಜಿ.ಆರ್. ಮೋಹನ್‌ಕುಮಾರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.