ಚಿತ್ರದುರ್ಗ: ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಮಂಜೂರಾತಿಗೆ ಆಗ್ರಹಿಸಿ, ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ ಖಂಡಿಸಿ ಜು. 15ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಕುಮಾರ್ ಸಮತಳ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ, ಜಿಲ್ಲೆಯಲ್ಲಿ ಸಾವಿರಾರು ಮಂದಿ ಬಡವರು ಸರ್ಕಾರಿ ಗೋಮಾಳ, ಹುಲ್ಲುಬನ್ನಿ, ಅಮೃತ್ ಮಹಲ್ ಕಾವಲ್, ಅರಣ್ಯ ಇನ್ನಿತರೆಡೆಗಳಲ್ಲಿ ಹಲವು ದಶಕಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಅಂತವರಿಗೆ ತ್ವರಿತವಾಗಿ ಹಕ್ಕುಪತ್ರ ನೀಡಬೇಕು ಎಂಬುದು ಸಮಿತಿಯ ಪ್ರಧಾನ ಹಕ್ಕೊತ್ತಾಯವಾಗಿದೆ ಎಂದರು.
ಶಾಸಕರ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿಗಾಗಿ ರಚನೆಯಾದ ಸಮಿತಿಗಳು ಕಾಲಕಾಲಕ್ಕೆ ಸಭೆ ಸೇರಿ ಬಡವರ ಬದುಕಿಗೆ ನೆರವಾಗಬೇಕು. ಆದರೆ, ಸಭೆಗಳು ನಡೆಯುತ್ತಿಲ್ಲ. ಹೀಗಾಗಿ ಅರ್ಹ ಸಾಗುವಳಿದಾರರನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂದು ಬೇಸರಿಸಿದರು.
ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸಿ, ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಹಾಗೂ ಭೂಮಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಕರೆಯಬೇಕು. ಅಲ್ಲಿಯ ತೀರ್ಮಾನಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅರಣ್ಯ ಹಾಗೂ ಕಂದಾಯ ಭೂಮಿ ಗೊಂದಲಗಳು ಮುಂದುವರಿದಿದ್ದು, ಜಂಟಿ ಸರ್ವೆ ನಡೆಸುವ ಮೂಲಕ ಸರಿಪಡಿಸಬೇಕು. ಯಾರನ್ನು ಯಾವ ಭೂಮಿಯಿಂದಲೂ ಒಕ್ಕಲೆಬ್ಬಿಸಬಾರದು. ಅಲ್ಲದೆ, ಸಾಗುವಳಿ ಮಾಡುತ್ತ ಸಲ್ಲಿಸಿರುವ ಯಾವುದೇ ಅರ್ಜಿ ತಿರಸ್ಕರಿಸದೆ, ಅರ್ಹರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ವಸತಿ ರಹಿತರು ಅರ್ಜಿ ಸಲ್ಲಿಸಿದ್ದು, ಆ ಎಲ್ಲರಿಗೂ ವಸತಿ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. 94‘ಸಿ’ ಮತ್ತು 94‘ಸಿಸಿ’ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಪುರಸ್ಕರಿಸಬೇಕು ಎಂದು ಕೋರಿದರು.
ಸಮಿತಿ ಅಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಪದಾಧಿಕಾರಿಗಳಾದ ಹನುಮಂತಣ್ಣ ಗೋನೂರು, ಎಚ್.ವೆಂಕಟೇಶ್, ಈರಣ್ಣ, ಚಂದ್ರಣ್ಣ, ಅಜ್ಜಪ್ಪ, ಪುರುಷೋತ್ತಮ್, ಶಶಾಂಕ್ ಇತರರಿದ್ದರು.