ಜಿಲ್ಲೆ

ಭೂಮಿ ಕಳೆದುಕೊಂಡವರಿಗೆ ಕಾಯಂ ಉದ್ಯೋಗ ನೀಡಲಿ: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯ

ಮೈಸೂರು: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲೆಯ ಪ್ರಥಮ ಸಮ್ಮೇಳನ ಇತ್ತೀಚಿಗೆ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ರೈತರು ರಾಮಸ್ವಾಮಿ ವೃತ್ತದಿಂದ ಜೆಎಲ್‌ಬಿ ರಸ್ತೆ ಮಾರ್ಗವಾಗಿ ರೋಟರಿ ಸಭಾಂಗಣಕ್ಕೆ ಮೆರವಣಿಗೆ ನಡೆಸಿ ರೈತರ ಪರ ಆಗ್ರಹ ಮೊಳಗಿಸಿದರು. ರೋಟರಿ ಸಭಾಂಗಣದಲ್ಲಿ ಸಭೆ ನಡೆಯಿತು.

ಅಳಗಂಚಿ, ಮಲ್ಲೂಪುರ, ಅಡಕನಹಳ್ಳಿ, ಕೆಂಪಿಸಿದ್ದನಹುಂಡಿ, ಇಮ್ಮಾವು, ತಾಂಡವಪುರ, ಕೋಚನಹಳ್ಳಿ, ಹುಳಿಮಾವು, ಕಡಕೊಳ ಮುಂತಾದ ಗ್ರಾಮಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ನೀಡಿದ ಎಲ್ಲ ರೈತರ ಕುಟುಂಬಗಳಿಗೆ ವಂಶಪಾರಂರ್ಯವಾಗಿ ಕಾಯಂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಲಾಯಿತು.

ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು. ಸಾಗುವಳಿ ನೀಡಿರುವ ರೈತರ ಭೂಮಿಯನ್ನು ದುರಸ್ತಿ ಮಾಡಬೇಕು. ಕಾಡುಪ್ರಾಣಿಗಳು ರೈತರ ಜಮೀನಿಗೆ ಬಂದು ಬೆಳೆ ನಾಶ ಮಾಡದಂತೆ ಹಾಗೂ ಪ್ರಾಣ ಹಾನಿ ಮಾಡದಂತೆ ರೈಲ್ವೆ ಕಂಬಿ, ಜಾಲರಿಗಳನ್ನು ಕಾಡಿನ ಸುತ್ತ ನಿರ್ಮಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳ ಹೂಳು ಎತ್ತಿಸಿ, ನದಿ ಮೂಲದಿಂದ ನೀರನ್ನು ತುಂಬಿಸಬೇಕು ಎಂದು ಒತ್ತಾಯಿಸಲಾಯಿತು.

ಮುದ್ದಹಳ್ಳಿ, ಏಲಚಗೆರೆ, ಸಿಂಧುವಳ್ಳಿಪುರ, ಹದಿನಾರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಫಲವಾತ್ತದ ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕೆಗಳ ಅಭಿವೃದ್ಧಿಗೆ ಬಲವಂತವಾಗಿ ಸ್ವಾಧೀನ ಮಾಡಲು ಹೊರಡಿಸಿರುವ ರಾಜ್ಯ ಪತ್ರವನ್ನು ಹಿಂಪಡೆಯಬೇಕು. ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಆಗ್ರಹಿಸಲಾಯಿತು

ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಯಂತ್ರೋಪಕರಣಗಳನ್ನು ಸಬ್ಸಿಡಿ ಮೂಲಕ ಕಡಿಮೆ ಬೆಲೆಗೆ ನೀಡಬೇಕು. ವಿದ್ಯುತ್ ಖಾಗೀಕರಣ ಹಾಗೂ ಹೊಸ ಕೃಷಿ ಮಾರುಕಟ್ಟೆ ನೀತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ಜನಾಂದೋಲನಗಳ ಮಹಾ ಮೈತ್ರಿ ರಾಜ್ಯ ಸಂಚಾಲಕ ಉಗ್ರನರಸಿಂಹೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಎಐಕೆಕೆಎಂಎಸ್ ಅಧ್ಯಕ್ಷ ಎಂ. ಶಶಿಧರ್, ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಜಿಲ್ಲಾ ಸಂಚಾಲಕ ಎಚ್.ಎಂ. ಬಸವರಾಜು, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷ ಎಚ್.ಪಿ. ಶಿವಪ್ರಕಾಶ್ ಭಾಗವಹಿಸಿದ್ದರು.

ನೂತನ ಸಮಿತಿ ಅಸ್ತಿತ್ವಕ್ಕೆ

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಬಸವೇಗೌಡ ಹಾರೋಹಳ್ಳಿ, ರಾಮಣ್ಣ ಕೆಲ್ಲಹಳ್ಳಿ, ರಂಗರಾಜು, ನಂಜುಂಡ, ಮತ್ತು ರಾಜು ಅಳಗಂಚಿ, ಕಾರ್ಯದರ್ಶಿಗಳಾಗಿ ಪುನೀತ್ ಅಳಗಂಚಿ, ಕಚೇರಿ ಕಾರ್ಯದರ್ಶಿಯಾಗಿ ಕೆ.ಕೆ.ರವಿಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ಉಮೇಶ್ ಕೆ.ಎಸ್.ಹುಂಡಿ, ಮಂಜು ಕೆಂಪಿಸಿದ್ದನಹುಂಡಿ, ಬಸವಣ್ಣ ಬಂಚಳ್ಳಿ ಹುಂಡಿ, ಮಂಜುನಾಥ್ ಮಲ್ಲುಪುರ, ಯೋಗೇಶ್ ಕೆಂಪಿಸಿದ್ದನಹುಂಡಿ ಆಯ್ಕೆಯಾದರು. ಅಲ್ಲದೆ, 10 ಜನ ಕಾರ್ಯಕಾರಿ ಸಮಿತಿ ಮತ್ತು 15 ಜನ ಕೌನ್ಸಿಲ್ ಸದಸ್ಯರನ್ನೊಳಗೊಂಡ ನೂತನ ಜಿಲ್ಲಾ ಸಮಿತಿಯನ್ನು ಚುನಾಯಿಸಲಾಯಿತು.