ಜಿಲ್ಲೆ

ಭೂಮಾಲೀಕರಿಗೆ ಮುಂಗಡ ಹಣ 10 ಲಕ್ಷ ರೂ.ಗೆ ಏರಿಕೆ

ಮೈಸೂರು: ಜಂಟಿ ಸಹಭಾಗಿತ್ವದಡಿ ಬಡಾವಣೆಗಳ ಅಭಿವೃದ್ಧಿಯನ್ನು 18 ತಿಂಗಳಿನಲ್ಲೇ ಪೂರ್ಣಗೊಳಿಸಲಾಗುವುದು. ಜತೆಗೆ, ಜಮೀನು ಬಿಟ್ಟುಕೊಟ್ಟ ಭೂಮಾಲೀಕರಿಗೆ ಪ್ರತಿ ಎಕರೆ 10 ಲಕ್ಷ ರೂ. ಮುಂಗಡವಾಗಿ ನೀಡಲಾಗುವುದು ಎಂದು ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದರು.
ಮಾಲೀಕರಿಂದ ಪಡೆದ ಭೂಮಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಬಡಾವಣೆ ಅಭಿವೃದ್ಧಿ ಪಡಿಸಿ ನಿವೇಶನ ಹಂಚಿಕೆ ಮಾಡಲಾಗುವುದು. ಈ ಸಂಬಂಧ ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದ ಕರಾರಿಗೆ ಒಳಪಡುವ ಭೂಮಾಲೀಕರಿಗೆ ನೀಡುವ ಮುಂಗಡ ಹಣವನ್ನು 5 ಲಕ್ಷ ರೂ.ದಿಂದ 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಜತೆಗೆ, ಲಭ್ಯವಾಗುವ ವಸತಿ ವಲಯದ ಶೇ.50:50ರ ಅನುಪಾತದಡಿ ಪ್ರತಿ ಎಕರೆಗೆ 30*40 ಚದರ ಅಡಿ ಅಳತೆಯ ಅಂದಾಜು 9 ನಿವೇಶನವನ್ನೂ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಡಾವಣೆಯ ಅಭಿವೃದ್ಧಿ ಬಳಿಕ ಭೂಮಾಲೀಕರು 10 ಲಕ್ಷ ರೂ.ಮೌಲ್ಯದ ನಿವೇಶನವನ್ನು ಮುಡಾಕ್ಕೆ ಬಿಟ್ಟುಕೊಡಬಹುದು. ಇಲ್ಲವೇ ಮುಂಗಡ ಹಣವನ್ನು ಮುಡಾಕ್ಕೆ ಪಾವತಿಸಿ, ನಿವೇಶನ ಪಡೆದುಕೊಳ್ಳಬಹುದು. ಮುಡಾ ನೀಡುವ ಒಟ್ಟು 9 ನಿವೇಶನಗಳನ್ನು ತಕ್ಷಣಕ್ಕೆ ಮಾರಾಟ ಮಾಡಿದ್ದರೂ ಕನಿಷ್ಠ 65 ಲಕ್ಷ ರೂ. ದೊರೆಯಬಹುದು. ವರ್ಷಗಟ್ಟಲೇ ಕಾಯ್ದಿಟ್ಟುಂಡು ಮಾರಿದ್ದರೂ ಅಧಿಕ ಲಾಭ ಗಳಿಸಬಹುದು ಎಂದರು.
ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಭೂಮಾಲೀಕತ್ವವನ್ನು ಹೊಂದಿದ್ದಲ್ಲಿ ಅವರು ಹಂಚಿಕೆ ಮಾಡುವಂತಹ ನಿವೇಶನಗಳ ಮೇಲೆ ಜಂಟಿಯಾಗಿ ಅನುಪಾತದ ಆಧಾರದ ಮೇಲೆ ಹಕ್ಕು ನೀಡಲಾಗುವುದು. ಆದರೆ, ಭೂಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನ ಹಂಚಿಕೆ ಮಾಡಲ್ಲ. ಹಂಚಿಕೆ ಪಡೆದವರು ಅವರ ನಿವೇಶನಗಳನ್ನು ಇತರರಿಗೆ ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಭೂಮಾಲೀಕರ ಪಾಲಿನ ಅನ್ವಯ ನಿವೇಶನ ಹಂಚಿಕೆಯು ಅತಿ ದೊಡ್ಡ ನಿವೇಶನದಿಂದ ಪ್ರಾರಂಭಗೊಂಡು ಅಂದರೆ 50*80, 40*60, 30*40 ಅಡಿ ಅನ್ವಯ ನೀಡಲಾಗುವುದು. ಆದರೆ, 20*30 ಅಡಿ ಅಳತೆಯ ನಿವೇಶನ ಭೂಮಾಲೀಕರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭೂಮಾಲೀಕರಿಂದ ಸ್ಪಂದನೆ:
ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆಗೆ ಭೂಮಾಲೀಕರಿಂದ ಸ್ಪಂದನೆ ವ್ಯಕ್ತವಾಗಿದ್ದು, 800 ಎಕರೆ ಜಾಗ ನೀಡಲು ಆಸಕ್ತಿ ತೋರಿದ್ದಾರೆ. ಈ ವಿಷಯದಲ್ಲಿ ಮುಡಾ ಕೂಡ ಮುಕ್ತವಾಗಿದ್ದು, ಅಂದಾಜು 3 ಸಾವಿರ ಎಕರೆಯನ್ನು ಬಡಾವಣೆಯಾಗಿ ಅಭಿವೃದ್ಧಿ ಪಡಿಸಲು ಸಿದ್ಧವಿದೆ ಎಂದರು.