ಜಿಲ್ಲೆ

ಭೂಪಾಲತೆಗನೂರ ಗ್ರಾಪಂ ಮರು ಚುನಾವಣೆಗೆ ಆಗ್ರಹ

ಕಲಬುರಗಿ: ತಾಲೂಕಿನ ಭೂಪಾಲತೆಗನೂರು ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷ , ಉಪಾಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಸಿಡಿಪಿಒ ಪ್ರೇಮಾ ಅವರು ಸರ್ಕಾರದ ನಿಯಮ ಗಾಳಿಗೆ ತೂರಿ ನಾಮಪತ್ರ ತಿರಸ್ಕರಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಮರು ಚುನಾವಣೆ ನಡೆಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ದಶರಥ ಕಲಗುರ್ತಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಚಕರ ಗುರುತಿನ ಚೀಟಿ ಇಲ್ಲ ಎನ್ನುವ ಮೂಲಕ ನಾಮಪತ್ರ ತಿರಸ್ಕರಿಸಿದ್ದಾರೆ. ಯಾವುದೇ ಹಿಂಬರಹ ನೀಡಿಲ್ಲ. ಎಲ್ಲ ಸದಸ್ಯರ ಸಹಿ ಪಡೆದು ಚುನಾವಣೆ ಮುಕ್ತಾಯವಾಯಿತು ಎಂದು ಹೇಳಿದ್ದಾರೆ. ಇದರಿಂದ ಮನನೊಂದು ಗ್ರಾಮ ಪಂಚಾಯಿತಿ ಸದಸ್ಯ ಹಣಮಂತ ಹೊಸಮನಿ ಜೀವ ಕಳೆದುಕೊಳ್ಳಲು ಯತ್ನಿಸಿದ ಘಟನೆಯೂ ನಡೆದಿದೆ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಕುರಿತು ಶನಿವಾರ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಜಿಲ್ಲಾ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ರಾಜು ಕಟ್ಟಿಮನಿ, ಬಾಬುರಾವ್ ಸುಂಠಾಣ, ಹಣಮಂತ ಹೊಸಮನಿ ಇದ್ದರು.