ಆನೇಕಲ್: ತಾಲೂಕಿನ ಭೂಮಿ ಬೆಲೆ ಗಗನಕ್ಕೆ ಏರುತ್ತಿರುವುರಿಂದ ಭೂ ಕಬಳಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಗಣಿ ಹೋಬಳಿಯ ಸುಮಾರು 10 ಕೋಟಿ ರೂ., ಬೆಲೆ ಬಾಳುವ ದಲಿತರ ಭೂಮಿಯನ್ನು ಆಂಧ್ರ ಮೂಲದವರು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರಜಾವಿಮೋಚನ ಚಳವಳಿ ಸಂಘಟನೆ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ದೂರಿದರು.
ವಂಚನೆಗೆ ಒಳಗಾದ ದಲಿತ ಕುಟುಂಬಗಳೊಂದಿಗೆ ಪ್ರಜಾವಿಮೋಚನ ಚಳವಳಿ ಸಂಘಟನೆಯಿಂದ ಸೋಮವಾರ ಜಿಗಣಿಯ ಕಂದಾಯ ಇಲಾಖೆ ನಾಡಕಚೇರಿ ಎದುರು ಧರಣಿ ನಡೆಸಿ ಮಾತನಾಡಿದರು.
ತಾಲೂಕಿನ ಹರಪನಹಳ್ಳಿಯ ಪ.ಜಾತಿಯ ಎ.ಕೆ.ನಾರಾಯಣ ಸರ್ವೇ ನಂ.2ರ ಒಂದು ಎಕರೆ ಜಮೀನು ಜಿಗಣಿ ಹೋಬಳಿ ಹುಲಿಮಂಗಲದ ಪಿಲ್ಲಗ ಎಂಬುವವರ ಸರ್ವೇ ನಂ.282ರ ಎರಡು ಎಕರೆ, ಮುನಿಗಾ ಅವರ ಸರ್ವೇ ನಂ. 156/50ರ ಪೈಕಿ ಎರಡು ಎಕರೆ ಭೂಮಿ ಮಂಜೂರಾಗಿತ್ತು.
ಆದರೆ ಮೂಲ ವಾರಸುದಾರರನ್ನು ವಂಚಿಸಿ ನಕಲಿ ದಾಖಲೆ ಸೃಷ್ಟಿಸಿ ಆಂಧ್ರ ಮೂಲದ ಲ್ಯಾಂಡ್ ಡೆವಲಪರ್‌ಗಳು ನೋಂದಣಿ ಮಾಡಿಕೊಂಡು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂಬ ಆದೇಶ ಇದ್ದರೂ ಅದನ್ನು ಧಿಕ್ಕರಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಗಣಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು.
ಬೆಂಗಳೂರು ವಿಭಾಗೀಯ ಅಧ್ಯಕ್ಷ ಯಡವನಳ್ಳಿ ಕೃಷ್ಣಪ್ಪ, ಗ್ರಾಪಂ ಸದಸ್ಯ ಚನ್ನೇನಹಳ್ಳಿ ವೆಂಕಟೇಶ್, ಮುಖಂಡರಾದ ಸಂಪಿಗೆಹಳ್ಳಿ ದೊರೆ, ಅರೇಹಳ್ಳಿ ಅಶ್ವತ್ಥ್, ಆರ್.ವೆಂಕಟೇಶ್, ಎ.ಲವ, ಕೊಪ್ಪರವಿ ಮತ್ತಿತರರಿದ್ದರು.