ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪನದಿಂದಾಗಿ ಭಯದಲ್ಲೇ ದಿನದೂಡುತ್ತಿರುವ ಸಂತ್ರಸ್ತ ಗ್ರಾಮಗಳ ಜನರು ಊರು ತೊರೆಯುತ್ತಿದ್ದಾರೆ. ಕಂಪನದಿಂದಾಗಿ ಮನೆ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಆಶ್ರಯ ಅರಸಿ ನೆರೆಊರಿನ ಗ್ರಾಮಗಳಲ್ಲಿನ ನೆಂಟರ ಮನೆಯತ್ತ ಮುಖಮಾಡಿದ್ದಾರೆ!
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಷ್ಟೇ ಧೈರ್ಯ ಹೇಳಿದರೂ ಗ್ರಾಮಸ್ಥರಲ್ಲಿ ಉಂಟಾಗಿರುವ ಭಯ ಸಣ್ಣ ಶಬ್ಧಕ್ಕೂ ಬೆಚ್ಚಿ ಬೀಳುವಂತೆ ಮಾಡಿದ್ದು ಊರು ತೊರೆಯಲು ಕಾರಣವಾಗಿದೆ. ಈಗಾಗಲೇ ತಾಲೂಕಿನ ಪಿಲ್ಲಗೊಂಡಹಳ್ಳಿ, ಬಂಡಹಳ್ಳಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಅಕ್ಕಪಕ್ಕದ ಊರುಗಳಿಗೆ ತೆರಳಿವೆ.
ಬುಧವಾರ ತಾಲೂಕಿನ ಮಂಡಿಕಲ್ಲು ಹೋಬಳಿ ಕೇಂದ್ರದಿಂದ 1.4 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.10 ಮತ್ತು ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ 1.23 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.14ರ ವೇಳೆಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ಕ್ರಮವಾಗಿ 3 ಮತ್ತು 2.9 ಕಂಪನದ ತೀವ್ರತೆಯ ಪ್ರಮಾಣ ದಾಖಲಾಗಿತ್ತು. ಜಿಲ್ಲಾಧಿಕಾರಿ ಸೇರಿ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಊರುಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದರು.
ಆಡಳಿತದ ಭರವಸೆಯಿಂದ ಕೊಂಚ ಸಮಾಧಾನವಾಗುವಷ್ಟರಲ್ಲಿ ಮರುದಿನ ಗುರುವಾರ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾದೇನಹಳ್ಳಿ, ಬೀರಗಾನಹಳ್ಳಿ, ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿಯಲ್ಲಿ 3.6 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಮಧ್ಯಾಹ್ನ 2.36ರ ವೇಳೆಗೆ ಮತ್ತೆ ಭೂಮಿ ನಡುಗಿದ್ದರಿಂದ ಕಂಗಾಲಾದ ಗ್ರಾಮಸ್ಥರು ನೆರೆ-ಹೊರೆಯ ಊರುಗಳತ್ತ ಪಯಣಿಸುತ್ತಿದ್ದಾರೆ.
ಆತಂಕಕ್ಕೆ ಕಾರಣವೇನು?: ಇದ್ದಕ್ಕಿದ್ದಂತೆ ಮನೆಗಳಲ್ಲಿ ಪಾತ್ರೆಗಳು ಕೆಳಕ್ಕೆ ಬೀಳುವುದು, ಕಂಪನಕ್ಕೂ ಮೊದಲು ಭಾರೀ ಶಬ್ದ ಕೇಳಿಸುವುದು, ಗೋಡೆಗಳು ಬಿರುಕು ಬಿಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಯಾವ ಕ್ಷಣದಲ್ಲಿ ಮತ್ತೆ ಭೂಕಂಪನವಾಗುತ್ತದೆಯೋ? ಎಂಬ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಗ್ರಾಮಗಳಲ್ಲಿ ಈಗಾಗಲೇ ಅನೇಕ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಬಿರುಕು ಮತ್ತಷ್ಟು ಹೆಚ್ಚಾಗಿದೆ. ಮಹಿಳೆಯರು, ಮಕ್ಕಳನ್ನು ನೆರೆ--ಹೊರೆ ಗ್ರಾಮದಲ್ಲಿರುವ ಸಂಬಂಧಿಕರು ಊರಿಗೆ ಕರೆಸಿಕೊಳ್ಳುತ್ತಿದ್ದಾರೆ. ಕೆಲವರು ಜಾನುವಾರುಗಳನ್ನು ಬಿಟ್ಟು ಹೋಗಲಾಗದೆ ಅಲ್ಲೇ ಉಳಿದುಕೊಂಡಿದ್ದರೂ ಹೆಚ್ಚಿನ ಸಮಯ ಮನೆಯಿಂದ ಹೊರಗೆ ಕಳೆಯುತ್ತಿದ್ದಾರೆ. ಈಗ ಊರಿನ ಜನ ಯಾವುದೇ ಶಬ್ದ ಕೇಳಿಸಿದರೂ ಬೆಚ್ಚಿ ಬೀಳುತ್ತಿದ್ದಾರೆ. ಬಿರುಕು ಬಿಟ್ಟ ಗೋಡೆಗಳಿಂದ ಕಲ್ಲು ಮಣ್ಣು ಉದುರಿದಾಗಲಂತೂ ಮತ್ತೆ ಭೂಕಂಪ ಸಂಭವಿಸಿದೆ ಎಂದುಕೊಳ್ಳುತ್ತಿದ್ದು ಗುರುವಾರ ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗುತ್ತಿದ್ದಂತೆ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು, ಶಿಕ್ಷಕರು ಭಯದಲ್ಲಿ ಕಣ್ಣೀರು ಹಾಕುತ್ತ ಕಿರುಚಿಕೊಂಡಿದ್ದರು.
ಇಲ್ಲಿ ಪದೇಪದೆ ಭೂಕಂಪನವಾಗುತ್ತಿದೆ. ಇದರಿಂದ ಈಗಾಗಲೇ ಹಲವರು ಮನೆಗಳಿಗೆ ಬೀಗ ಹಾಕಿ, ಊರು ತೊರೆದಿದ್ದಾರೆ. ನಮಗೂ ಇಲ್ಲಿರಲು ಭಯವಾಗುತ್ತಿದೆ. ರಾಮಪ್ಪ, ಸ್ಥಳೀಯ ನಿವಾಸಿ, ಪಿಲ್ಲಗೊಂಡಹಳ್ಳಿ
ಧೈರ್ಯ ತುಂಬಿ ಮನವೊಲಿಕೆ: ಈ ಹಿಂದೆ ಮಳೆ ಅಭಾವದಿಂದ ಅಂತರ್ಜಲಮಟ್ಟ ಕುಸಿತ ಕಂಡಿದ್ದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ. ಕೆರೆ-ಕುಂಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗಿರುವುದರ ಜತೆಗೆ ಅಂತರ್ಜಲವೂ ಏರಿಕೆಯಾಗಿದೆ. ಇದರಿಂದ ನೀರು ಆಳಕ್ಕೆ ಇಳಿಯುವ ಸಂದರ್ಭದಲ್ಲಿ ಮೇಲಕ್ಕೆ ಏರ್ ಬ್ಲಾಸ್ಟ್ ಆಗಿ ಆಗಾಗ ಶಬ್ದ ಕೇಳಿಸುತ್ತಿದೆ. ಈ ಘರ್ಷಣೆಯ ಪ್ರಕ್ರಿಯೆಗೆ ಭೂಕಂಪನದ ಅನುಭವವಾಗುತ್ತಿದ್ದು ತೀವ್ರತೆಯ ಪ್ರಮಾಣವು ಸರಾಸರಿ 3 ರಷ್ಟಿರಲಿದೆ, ಇದರಿಂದ ಸಣ್ಣ ಪ್ರಮಾಣ ಅಲುಗಾಟದ ಅನುಭವವಾಗುತ್ತದೆಯೇ ಹೊರತು ಯಾವುದೇ ದೊಡ್ಡ ಹಾನಿ ಸಂಭವಿಸುವುದಿಲ್ಲ ಎಂಬುದಾಗಿ ಅಧಿಕಾರಿಗಳು ಧೈರ್ಯ ಹೇಳುತ್ತಿದ್ದಾರಾದರೂ ಭಯ ಮಾತ್ರ ದೂರವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳ ದೌಡು: ಭೂ ವಿಜ್ಞಾನಿಗಳು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಶುಕ್ರವಾರ ಭೂಕಂಪನದ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಶೀಲಿಸಿದ್ದಾರೆ. ತಾಲೂಕಿನ ಹೊಸಹಳ್ಳಿ, ದೊಡ್ಡಿಹಳ್ಳಿ, ಬಂಡಹಳ್ಳಿ, ಅರೂರು, ಬೋರ್ಗಪತಿ ಸೇರಿ ವಿವಿಧೆಡೆ ಮಾಹಿತಿ ಸಂಗ್ರಹಿಸಿದರು.
ಭೂಕಂಪನ ಅನುಭವ ಉಂಟಾದ ಗ್ರಾಮಗಳಲ್ಲಿ ಜನರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಲಾಗಿದೆ. ಜಿಲ್ಲೆಯು ಸುರಕ್ಷಿತ ವಲಯ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಆರ್.ಲತಾ, ಜಿಲ್ಲಾಧಿಕಾರಿ