ಚಿತ್ರದುರ್ಗ: ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ, ಸೂರು ಇಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ರವಾನಿಸಿದರು.
ಭೂಮಿ ಮಂಜೂರಾತಿಗೆ ಇನ್ನೆಷ್ಟು ವರ್ಷಗಳು ಬೇಕೆಂದು ಪ್ರಶ್ನಿಸಿದ ಸಾಗುವಳಿದಾರರು, ಬೇಡಿಕೆಗಳು ಈಡೇರದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾದ್ಯಂತ ಗೋಮಾಳ, ಹುಲ್ಲು ಬನ್ನಿ, ಖರಾಬ್ ಜತೆಗೆ ಈಚೆಗೆ ಅರಣ್ಯ ಇಲಾಖೆ ಹಿಂಪಡೆದ ಭೂಮಿಯನ್ನು ಈಗಾಗಲೇ ಅರ್ಜಿ ಸಲ್ಲಿಸಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರು ಮಾಡಬೇಕು. ರೈತರ ಭೂ ಹಕ್ಕನ್ನು ಯಾವ ಕಾರಣಕ್ಕೂ ತಿರಸ್ಕೃತಗೊಳಿಸಬಾರದು ಎಂದು ಒತ್ತಾಯಿಸಿದರು.
ಬಗರ್‌ಹುಕುಂ ಅರ್ಜಿದಾರರ ಭೂಮಿಗಳನ್ನು ಜಿಪಿಎಸ್ ಸರ್ವೆ ನಡೆಸಿ, ಸಮಿತಿಯ ಮುಂದೆ ಮಂಜೂರಾತಿಗೆ ಪಾರದರ್ಶಕ ವರದಿ ಸಲ್ಲಿಸಬೇಕು. ರೈತರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ತಡೆಯಬೇಕು. ಅರಣ್ಯ-ಕಂದಾಯ ಇಲಾಖೆ ನಡುವಿನ ಗೊಂದಲಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಲಕ್ಷ್ಮ್ಮಮ್ಮ, ನಂದಮ್ಮ, ಸ್ವರ್ಣಭಟ್, ಹನುಮಕ್ಕ, ಡಿ.ಎಚ್.ಪೂಜಾರ್, ಪಾಪಮ್ಮ, ಕುಮಾರ್ ಸಮತಳ, ಕೆ.ಮರಿಯಪ್ಪ, ಸತ್ಯಪ್ಪ ಮಲ್ಲಾಪುರ, ಟಿ.ಶಫಿವುಲ್ಲಾ, ಹನುಮಂತಣ್ಣ, ಕರಿಯಪ್ಪ, ಈರಜ್ಜ, ಮಲ್ಲಿಕಾರ್ಜುನ್ ಇತರರಿದ್ದರು.