ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಅಗ್ರಹಾರಬಾಚಹಳ್ಳಿ ಗೇಟ್ ಬಳಿ ಜಲಸೂರು ಬೆಂಗಳೂರು ಬೈಪಾಸ್ ರಸ್ತೆಯ ಬಳಿ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿ ರಸ್ತೆ ಕಾಮಗಾರಿಯನ್ನು ತಡೆದರು. 
ಜಿಲ್ಲೆ

ಭೂ ಸ್ವಾಧೀನ ಪರಿಹಾರ ತಾರತಮ್ಯಕ್ಕೆ ವಿರೋಧ

ಕೆ.ಆರ್.ಪೇಟೆ: ಬೈಪಾಸ್ ರಸ್ತೆ ನಿರ್ಮಾಣ ಭೂ ಸ್ವಾಧೀನ ಪರಿಹಾರ ತಾರತಮ್ಯ ವಿರೋಧಿಸಿ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯ ಸಂತ್ರಸ್ತ ರೈತರು ಬುಧವಾರ ತಾಲೂಕಿನ ಅಗ್ರಹಾರಬಾಚಹಳ್ಳಿ ಗೇಟ್ ಬಳಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ಕೆ-ಶಿಪ್‌ನಡಿ ನಿರ್ಮಿಸುತ್ತಿರುವ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅವಶ್ಯಕ ಜಮೀನನ್ನು ರೈತರಿಂದ ಭೂ ಸ್ವಾಧೀನ ಮಾಡಿಕೊಂಡು ಒಂದು ಗುಂಟೆ ಭೂಮಿಗೆ 15 ರಿಂದ 20 ಸಾವಿರ ರೂ. ಪರಿಹಾರ ನೀಡಿದ್ದರೂ ಪರಿಹಾರವು ಅವೈಜ್ಞಾನಿಕವಾಗಿದೆ ಎಂದು ಕೆಲ ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿ ಹೆಚ್ಚುವರಿ ಪರಿಹಾರಕ್ಕಾಗಿ ಒತ್ತಾಯಿಸಿದ್ದರು. ನ್ಯಾಯಾಲಯ ರೈತರ ಮನವಿಯನ್ನು ಪರಿಗಣಿಸಿ ಹೆಚ್ಚುವರಿ ಪರಿಹಾರಕ್ಕೆ ಆದೇಶ ನೀಡಿದೆ. ನ್ಯಾಯಾಲಯದಲ್ಲಿ ಪ್ರಶ್ನಿಸಿದ ರೈತರಿಗೆ ಗುಂಟೆಗೆ ಲಕ್ಷಾಂತರ ರೂ. ಪರಿಹಾರ ದೊರೆತಿದೆ. ಈಗಾಗಲೇ ಕಡಿಮೆ ಪರಿಹಾರ ಪಡೆದಿರುವ ರೈತರು ನ್ಯಾಯಾಲಯದ ಆದೇಶದಂತೆ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಬುಧವಾರ ಅಧಿಕಾರಿಗಳು ಕಾಮಗಾರಿಗೆ ಮುಂದಾದ ವೇಳೆ ಸ್ಥಳದಲ್ಲಿ ಜಮಾಯಿಸಿದ ರೈತರು ಯಂತ್ರೋಪಕರಣಗಳ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸರ ನೆರವಿನೊಂದಿಗೆ ರಸ್ತೆ ನಿರ್ಮಿಸಿದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಇದರಿಂದಾಗುವ ಎಲ್ಲ ಅನಾಹುತಕ್ಕೆ ಕೆ-ಶಿಪ್ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ಕೆ-ಶಿಫ್ ಇಇ ಶಿವಲಿಂಗೇಗೌಡ, ತಹಸೀಲ್ದಾರ್ ನಿಸರ್ಗಪ್ರಿಯಾ, ಸರ್ವೇ ಸೂಪರ್‌ವೈಸರ್ ತಿಮ್ಮಪ್ಪಗೌಡ, ನಾಗಮಂಗಲ ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್, ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್, ಆನಂದಕುಮಾರ್, ನೂರಾರು ರೈತರಿದ್ದರು.

ಕೆ-ಶಿಪ್ ಅಧಿಕಾರಿಗಳಿಗೆ ಶಾಸಕ ತರಾಟೆ: ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಎಚ್.ಟಿ.ಮಂಜು ರೈತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿರುವ ಕೆಶಿಪ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡು ಅತ್ಯಲ್ಪ ಪರಿಹಾರ ಪಡೆದುಕೊಂಡಿರುವ ಅನ್ನದಾತರಿಗೆ ಪರಿಹಾರ ನೀಡುವಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ. ನಂತರ ರಸ್ತೆ ನಿರ್ಮಾಣ ಮಾಡಿ ಎಂದು ಖಡಕ್ ನಿರ್ದೇಶನ ನೀಡಿದರು. ರೈತರು ಅಗತ್ಯ ದಾಖಲೆ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಿ ನಂತರ ರಸ್ತೆ ಅಭಿವೃದ್ಧಿ ಕೆಲಸ ಮಾಡಿ ಎಂದು ರೈತರ ಪರ ದನಿ ಎತ್ತಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಬಂದ ದಾರಿಗೆ ಸುಂಕವಿಲ್ಲದೇ ಹಿಂದಿರುಗಿದರು.