ಕೊಪ್ಪ: ತಾಲೂಕು ಕಚೇರಿಯಲ್ಲಿ ಭೂ ಸಂಬಂಧಿತ ದಾಖಲೆಗಳಿಗೆ ಡಿಜಿಟಲ್ ಸೇವೆ ನೀಡಲು ಸರ್ಕಾರ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.
ಬಾಳಗಡಿಯ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭೂ ಸುರಕ್ಷಾ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಕೃಷ್ಣಭೈರೇಗೌಡರ ಐತಿಹಾಸಿಕ ಕಾರ್ಯಕ್ರಮವಿದು. ಇದರಿಂದ ಹಳೆಯ ಕಡತಗಳನ್ನು ಡಿಜಿಟಲ್ ಮಾಡಲಾಗುತ್ತದೆ. ರೆಕಾರ್ಡ್ ರೂಮಿನಲ್ಲಿ ಭೂ ದಾಖಲೆಗಾಗಿ ಸಾರ್ವಜನಿಕರು ಕಾಯುವುದು ತಪ್ಪುತ್ತದೆ ಎಂದರು.
ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಸುಲಭ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಸರ್ಕಾರದ ಈ ಯೋಜನೆಯಿಂದ ಭೂಗಳ್ಳರು, ನಕಲಿ ಹಕ್ಕುಪತ್ರ ನೀಡುವವರು, ಭ್ರಷ್ಟ ಅಧಿಕಾರಿಗಳಿಗೆ ತೊಂದರೆ ಆಗಲಿದೆ ಎಂದು ತಿಳಿಸಿದರು.
ಅಧಿಕಾರಿಗಳು ಕಾರ್ಯಕ್ರಮದಲ್ಲಿ ಸರಿಯಾಗಿ ನಡೆದುಕೊಂಡಿಲ್ಲ ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎನ್.ಆರ್.ಪುರ ತಹಸೀಲ್ದಾರ್ ತನುಜಾ ಸವದತ್ತಿ, ಉಪ ತಹಸೀಲ್ದಾರ್ ನಾಗರಾಜ್, ಶಿರಸ್ತೇದಾರ್ ಸುಧೀರ್, ಆರ್.ಐ ರತ್ನಾಕರ್, ಅಭಿಷೇಕ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಜಿ ಶೋಬಿಂತ್, ಸದಸ್ಯೆ ಅನ್ನಪೂರ್ಣ ನರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್ ಮುಂತಾದವರಿದ್ದರು.