ಜಿಲ್ಲೆ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಿ

Dharwad

ಹುಬ್ಬಳ್ಳಿ: 1974ರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದ್ದು, ಸರ್ಕಾರ ಈ ಕೂಡಲೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸೆಕ್ಷನ್ 79ಎ, 79ಬಿ, 94 ಹಾಗೂ 63 ಕಲಂಗಳನ್ನು ರದ್ದುಪಡಿಸಲಾಗಿದೆ. ಇದರಿಂದ ದಲ್ಲಾಳಿಗಳ ಒತ್ತಡ ಹಾಗೂ ಹಣದ ಆಸೆಗೆ ಸಣ್ಣ ರೈತರು ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.

ಈ ತಿದ್ದುಪಡಿಯಿಂದ ನ್ಯಾಯಾಲಯದಲ್ಲಿದ್ದ 13,814 ಪ್ರಕರಣಗಳು ಅಪರಾಧ ರಹಿತವಾಗಿ ಖುಲಾಸೆಗೊಂಡು ಅಪರಾಧಿಗಳೆಲ್ಲ ನಿರಪರಾಧಿಗಳಾದರೂ ಸರ್ಕಾರ ಕೈಗಾರಿಕಾ ಅಭಿವೃದ್ಧಿ ಮತ್ತು ಕೃಷಿಕರಲ್ಲದವರು ಕೃಷಿಗೆ ಬರಲಿ ಎಂಬ ಸಬೂಬು ನೀಡುತ್ತಿದೆ. ಈಗಾಗಲೇ ಕೈಗಾರಿಕಾ ಅಭಿವೃದ್ಧಿಗೆ ಎಂದು ರೈತರಿಂದ ಪಡೆದ ಶೇ. 50ರಷ್ಟು ಭೂಮಿ ಯಾವುದೇ ಕೈಗಾರಿಕೆಗೆ ಉಪಯೋಗವಾಗದೇ ಪಾಳು ಬಿದ್ದಿವೆ. ಈ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿರುವುದರ ಹಿಂದೆ ಕಾಪೋರೇಟ್ ಕಂಪನಿಗಳು, ಭೂ ಮಾಫಿಯಾ, ಬಂಡವಾಳಶಾಹಿಗಳು ಹಾಗೂ ಬೇನಾಮಿ ಆಸ್ತಿ ಹೊಂದಿರುವವರ ಕೈವಾಡ ಎದ್ದು ಕಾಣುತ್ತಿದೆ. ರೈತನ ಉಳಿವಿಗಾಗಿ ಸರ್ಕಾರ ಈ ಕೂಡಲೇ ಸುಗ್ರೀವಾಜ್ಞೆ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಪ್ರಾಂತ ಉಪಾಧ್ಯಕ್ಷ ವಿವೇಕ ಮೋರೆ, ಕಾರ್ಯದರ್ಶಿ ಡಿ.ಸಿ ರಂಗರೆಡ್ಡಿ, ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಮಂಜು ಗೌರಿ, ಗುರುನಾಥಗೌಡ, ಮತ್ತಿತರರು ಇದ್ದರು.