ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಮೇಲೆ ಹಲ್ಲೆ ಖಂಡಿಸಿ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿದರು. ಜಗದೀಶ್, ಶಬ್ಬೀರ್ ಇತರರು ಇದ್ದರು. 
ಜಿಲ್ಲೆ

ಭೂ ಮಾಫಿಯಾದಿಂದಲೇ ಹಲ್ಲೆ

ಕುಶಾಲನಗರ: ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಮೇಲೆ ಭೂ ಮಾಫಿಯಾದ ದಂಧೆಕೋರರು ಹಲ್ಲೆ ಮಾಡಿದ್ದಾರೆ. ಅಕ್ರಮ ಬಡಾವಣೆ ನಿರ್ಮಾಣಕ್ಕೆ ಸಹಕಾರ ನೀಡದಿರುವುದರಿಂದ ಹಲ್ಲೆ ಮಾಡಿರುವುದು ಗೋಚರಿಸುತ್ತಿದೆ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಆರೋಪಿಸಿದರು.

ಕುಶಾಲನಗರ ಪುರಸಭೆ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಟ್ಲರ್ ರಾಜ್ಯದಲ್ಲಿ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಸಾರ್ವಜನಿಕರ ಸೇವೆಗಾಗಿ ಆಡಳಿತವಿರುವುದೋ ಅಥವಾ ಭೂ ಮಾಫಿಯದವರಿಗಾಗಿಯೋ ಎಂಬುದು ತಿಳಿಯುತ್ತಿಲ್ಲ. ದನಗಳ ಮೇಲೂ ಇಷ್ಟು ಕ್ರೂರವಾಗಿ ಹಲ್ಲೆ ಮಾಡುವುದಿಲ್ಲ. ಆದರೆ ಒಬ್ಬ ಅಧಿಕಾರಿಯ ಮೇಲೆ ಈ ರೀತಿಯ ಹಲ್ಲೆ ಅಕ್ಷಮ್ಯ ಅಪರಾಧ. ಈ ಕ್ರೌರ್ಯವನ್ನು ಖಂಡಿಸಲಾಗದವರು ಯಾಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಶಾಲನಗರ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳ ವಿಚಾರಣೆಗಾಗಿಯೇ ವಿಶೇಷ ಕೋರ್ಟ್ ಮಾಡುವಷ್ಟು ಕಡತಗಳು ದೊರೆಯುತ್ತವೆ. ಅಷ್ಟು ಅಕ್ರಮ ಮತ್ತು ಸಮಸ್ಯೆಗಳು ಇವೆ. ಹಲ್ಲೆಕೋರರನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪುರಸಭೆ ಸದಸ್ಯ ಜಗದೀಶ್, ಶಬ್ಬೀರ್ ಹಾಗೂ ಚಂದ್ರು ಸೇರಿದಂತೆ ಇತರರು ಇದ್ದರು.