ಚಿತ್ರದುರ್ಗ: ಹಿರಿಯೂರು ತಾಲೂಕು ಕಸಬಾ ಹೋಬಳಿ ಯರಕೇನಾಗೇನಹಳ್ಳಿ ರಿ.ಸ.ನಂ.24ರಲ್ಲಿರುವ 30.18 ಎಕರೆ ಸರ್ಕಾರಿ ಅಬಕಾರಿ ಖರಾಬು ಜಮೀನಿನಲ್ಲಿ ಬೆಂಗಳೂರು ಮಾಜಿ ಸೈನಿಕರೊಬ್ಬರಿಗೆ 4.38 ಎಕರೆ ಭೂಮಿ ಮಂಜೂರಾತಿ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ತಡೆ ನೀಡಬೇಕು ಎಂದು ಯರಕೇನಾಗೇನಹಳ್ಳಿ, ಕುರುಬರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಮಾಜಿ ಸೈನಿಕ ಎಸ್.ಹರ್ಷ ಅವರಿಗೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಎಸಿ ಅವರಿಗೆ ಹಿರಿಯೂರು ತಹಸೀಲ್ದಾರ್ ಸಲ್ಲಿಸಿರುತ್ತಾರೆ. ಆದರೆ, ಪ್ರಸ್ತಾವನೆಯಲ್ಲಿರುವ ಖರಾಬು ಜಮೀನಿನಲ್ಲಿ ಲಂಬಾಣಿ ಸಮುದಾಯದ 20 ಮಂದಿ 15 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ನಮೂನೆ 53 ಮತ್ತು 57ರಲ್ಲಿ ಹಕ್ಕುಪತ್ರ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳು ಕೂಲಂಕಷ ಪರಿಶೀಲಿಸದೆ ಭೂಮಿ ಮಂಜೂರಿಗಾಗಿ ಎಸಿಗೆ ಅವೈಜ್ಞಾನಿಕವಾಗಿ ವರದಿ ಸಲ್ಲಿಸಿದ್ದಾರೆ. ಆದ್ದರಿಂದ ಈ ಪ್ರಸ್ತಾವನೆ ತಡೆ ಹಿಡಿದು ಹಾಲಿ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡಬೇಕು. ನಿವೃತ್ತ ಯೋಧರಿಗೆ ಬೇರೆಡೆ ಜಮೀನು ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ ಕಾರ‌್ಯದರ್ಶಿ ಆರ್.ನಿಂಗಾನಾಯ್ಕ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ಆರ್.ನರೇನಹಳ್ಳಿ ಅರುಣ್‌ಕುಮಾರ್, ಪ್ರಕಾಶ್, ಎಲ್.ಪಿ.ಮಂಜನಾಯ್ಕ, ಕಣಮನಾಯ್ಕ, ಪಾಪನಾಯ್ಕ, ಸುರೇಶ್‌ನಾಯ್ಕ, ಚಂದ್ರನಾಯ್ಕ, ರಾಮಾಂಜನಿನಾಯ್ಕ, ುರುರಾಜ, ಪುಟ್ಟಿಬಾಯಿ, ಮೀನಾಕ್ಷಿಬಾಯಿ, ಲಕ್ಷ್ಮೀಬಾಯಿ, ಚಂದ್ರನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.