ಜಿಲ್ಲೆ

ಭೂ ಪರಿಹಾರ ನೀಡದ ಕಾರಣ ಸರ್ಕಾರಿ ಕಾರು ಜಪ್ತಿ:ಚೆಕ್ ನೀಡಿ ವಾಹನ ಬಿಡಿಸಿಕೊಂಡು ಹೋದ ಅಧಿಕಾರಿ

ಹಾಸನ: ಕಳೆದ 13 ವರ್ಷಗಳಿಂದ ಯಗಚಿ ನಾಲೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ವಿಶೇಷ ಭೂ ಸ್ವಾಧೀನಾಧಿಕಾರಿ ಸರ್ಕಾರಿ ಕಾರನ್ನು ಕೋರ್ಟ್ ಆದೇಶದ ಮೇರೆಗೆ ಜಪ್ತಿ ಮಾಡಲಾಯಿತು. ಸಂಜೆ 5 ಗಂಟೆಗೆ ಕೋರ್ಟ್ ಮುಂದೆ ಹಾಜರಾದ ಎಸ್‌ಎಲ್‌ಒ ಮಂಜುನಾಥ್ ಅವರು ನ್ಯಾಯಾಲಯಕ್ಕೆ 8.85 ಲಕ್ಷ ರೂ. ಚೆಕ್ ನೀಡಿ, ಮುಂದಿನ ವಿಚಾರಣೆ ವೇಳೆಗೆ ಪೂರ್ತಿ ಹಣವನ್ನು ನೀಡುವುದಾಗಿ ಹೇಳಿ ಕಾರನ್ನು ಬಿಡಿಸಿಕೊಂಡು ಬಂದರು.

ತಾಲೂಕಿನ ಕಟ್ಟಾಯ ಹೋಬಳಿಯ ಡೋರನಹೊಸಳ್ಳಿ ಗ್ರಾಮದ ಯೋಗೀಶ್ ಎಂಬುವರಿಗೆ ಸೇರಿದ ಸರ್ವೆ ನಂ. 1/10, 1/09, ಹಾಗೂ 32/3ನ 13 ಗುಂಟೆ ಜಮೀನನ್ನು 2010ರಲ್ಲಿ ನೋಟಿಫಿಕೇಶನ್ ಮಾಡಿ ವಶಪಡಿಸಿಕೊಳ್ಳಲಾಗಿತ್ತುತು. 2015ರಲ್ಲಿ ಒಂದು ಗುಂಟೆಗೆ ಒಂದು ಲಕ್ಷ ರೂ.ನಂತೆ ಪರಿಹಾರ ನೀಡುವಂತೆ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿತ್ತು.

ಇದೇ ಪ್ರಕರಣದಲ್ಲಿ ಕಳೆದ ಒಂದು ತಿಂಗಳ ಹಿಂದೆಯೂ ಕೂಡ ವಿಶೇಷ ಭೂಸ್ವಾಧೀನ ಅಧಿಕಾರಿಗಳ ವಾಹನವನ್ನು ಜಪ್ತಿ ಮಾಡಲಾಗಿತ್ತು. ಆಗ ಒಂದು ತಿಂಗಳ ಒಳಗಾಗಿ ಸಂತ್ರಸ್ತರಿಗೆ ಪರಿಹಾರದ ಹಣ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಾಹನವನ್ನು ಹಿಂದಿರುಗಿಸಿ ಕೊಟ್ಟಿತ್ತು. ಆದರೆ ಅವಧಿ ಮುಗಿದರೂ ಕೂಡ ಪರಿಹಾರದ ಹಣವನ್ನು ನೀಡದ ಕಾರಣ ಶುಕ್ರವಾರ ಕೋರ್ಟ್ ಮತ್ತೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗಳ ವಾಹನವನ್ನು ಜಪ್ತಿ ಮಾಡಲು ಶುಕ್ರವಾರ ಆದೇಶ ಹೊರಡಿಸಿತ್ತು. ಆದರೆ ಡಿಸಿ ಮತ್ತು ಎಡಿಸಿ ಅವರ ವಾಹನಗಳು ಸಿಗದ ಹಿನ್ನೆಲೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಮಂಜುನಾಥ್ ಅವರ ವಾಹನವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸಂತ್ರಸ್ತ ಯೋಗೀಶ್ ಅವರಿಗೆ ಜಿಲ್ಲಾಡಳಿತ ಒಟ್ಟು 45 ಲಕ್ಷ ರೂ. (ಬಡ್ಡಿ ಮತ್ತು ಈಗಿನ ಮಾರುಕಟ್ಟೆ ದರ ಅನ್ವಯ) ಪರಿಹಾರವನ್ನು ನೀಡಬೇಕಾಗಿದೆ. ಈ ಮೊತ್ತದಲ್ಲಿ 8.85 ಲಕ್ಷ ರೂ. ಚೆಕ್ ಅನ್ನು ಎಸ್‌ಎಲ್‌ಒ ಶುಕ್ರವಾರ ಸಂಜೆ ಕೋರ್ಟ್‌ಗೆ ನೀಡಿ, ಮುಂದಿನ ವಿಚಾರಣೆ ವೇಳೆಗೆ ಪೂರ್ತಿ ಹಣ ನೀಡುವುದಾಗಿ ಭರವಸೆ ನೀಡಿದ ಮೇಲೆ ಕಾರು ಬಿಡುಗಡೆ ಮಾಡಲಾಗಿದೆ ಎಂದು ಕಕ್ಷಿದಾರರ ಪರ ವಕೀಲ ಮಂಜುನಾಥ್ ಮಾವಿನಕೆರೆ ತಿಳಿಸಿದರು.