ಜಿಲ್ಲೆ

ಭೂ ತಾಯಿ ಎಂದಿಗೂ ಕೈಬಿಡಲ್ಲರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಕೃಷಿ ಬಿ.ಸಿ.ಪಾಟೀಲ್ ಹೇಳಿಕೆ

ಚಿಕ್ಕಬಳ್ಳಾಪುರ: ಎತ್ತಿನಗಾಡಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮೆರವಣಿಗೆ, ಕೃಷಿ ಜಮೀನಿನಲ್ಲಿ ಬಿತ್ತನೆ, ತೋಟದಲ್ಲಿನ ಸಿಹಿ ಹಣ್ಣುಗಳನ್ನು ಸವಿದು ರೈತರೊಂದಿಗೆ ಸಂವಾದ, ಪ್ರಗತಿದಾಯಕ ಕೃಷಿಗೆ ನಾನಾ ಸವಲತ್ತುಗಳ ವಿತರಣೆ, ಊರೆಲ್ಲ ಗ್ರಾಮೀಣ ಸೊಗಡಿನ ಹಬ್ಬದ ವಾತಾವರಣ...ಇವು ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಕೃಷಿ ಕಡೆಗೆ ಆಕರ್ಷಿಸಿ, ಆಧುನಿಕ ಕೃಷಿ ಪದ್ಧತಿ ಮತ್ತು ಕೃಷಿ ತಾಂತ್ರಿಕತೆಗಳ ಅಳವಡಿಕೆಯ ಉತ್ತೇಜನ ನೀಡುವ ನಿಟ್ಟಿನಲ್ಲಿ ತಾಲೂಕಿನ ಎಸ್.ಗೊಲ್ಲಹಳ್ಳಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಕೈಗೊಂಡಿದ್ದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ನೋಟ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಲಾಭದಾಯಕ ಕೃಷಿ ಕ್ಷೇತ್ರದಲ್ಲಿ ಯುವಕರು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ವಿವಿಧ ಕ್ಷೇತ್ರಗಳ ಪ್ರಭಾವದಿಂದ ಕೃಷಿಯನ್ನು ಕಡೆಗಣಿಸುತ್ತಿದ್ದೇವೆ. ಕೃಷಿ ಲಾಭದಾಯಕವಲ್ಲ ಎಂಬುದಾಗಿಯೇ ಪರಿಗಣಿಸಲಾಗಿದೆ. ಇದರಿಂದಾಗಿ ಬಹುತೇಕ ಯುವಜನರು ಬೇರೆ ಕೆಲಸಕ್ಕಾಗಿ ನಗರ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ, ಮತ್ತೆ ಗ್ರಾಮಗಳತ್ತ ಸೆಳೆಯಯವ ಕೆಲಸವಾಗಬೇಕಾಗಿದೆ ಎಂದರು.

ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಜಾರಿಗೊಳಿಸಿದ ಹಲವು ವಿನೂತನ ಕಾರ್ಯಕ್ರಮಗಳ ಪೈಕಿ ರೈತರೊಂದಿಗೆ ಒಂದು ದಿನ ವಿಶೇಷವಾದುದು. ಇದರ ಮೂಲಕ ರೈತರೊಂದಿಗೆ ಬೆರೆತು, ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ, ರೈತರ ಟ್ರ್ಯಾಕ್ಟರ್ ಡೀಸೆಲ್‌ಗೆ ಸಬ್ಸಿಡಿ ಸೇರಿ ಹಲವು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಅದರಲ್ಲೂ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಪ್ರಧಾನ ಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ರೈತರ ಖಾತೆಗಳಿಗೆ ಮೂರು ಕಂತುಗಳಲ್ಲಿ ನೇರವಾಗಿ ತಲಾ 10 ಸಾವಿರ ರೂ. ಜಮಾ ಮಾಡಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಕಾಲೇಜುಗಳಲ್ಲಿ ರೈತ ಮಕ್ಕಳ ಮೀಸಲಾತಿಯನ್ನು ಶೇ.40ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 186 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಾವಕಾಶ ಸಿಕ್ಕಿದೆ ಎಂದರು.

ತುಂತುರು ಮತ್ತು ಹನಿ ನೀರಾವರಿಗೆ ಗರಿಷ್ಠ ಸಬ್ಸಿಡಿ, ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ಸೇರಿ ಹಲವು ಸುಧಾರಣೆಗಳ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಶ್ರಮಿಸಲಾಗುತ್ತಿದೆ. ಮಹಾನಗರಗಳಲ್ಲಿನ ವೀಕೆಂಡ್ ಪಬ್ ಕಲ್ಚರ್ ಹೋಗಿ, ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಬರಬೇಕು. ಭೂತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಹಳ್ಳಿಗಳು ಸ್ವಾವಲಂಬಿ ಪ್ರಗತಿ ಕಾಣಲು ಕೃಷಿಕರ ಮನೆ ಸಮೃದ್ಧಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಿದೆ. ಮಹತ್ತರವಾದ ಯೋಜನೆಗಳನ್ನು ಘೋಷಿಸುತ್ತಿದೆ. ಕೇಂದ್ರದ ಸಲ್ ಭಿಮಾ ಯೋಜನೆಯನ್ನು ರೈತರು ಹೆಚ್ಚಿಗೆ ಸದ್ವಿನಿಯೋಗಪಡಿಸಿಕೊಳ್ಳಬೇಕು. ಇದರಲ್ಲಿ ಶೇ.100 ಗುರಿ ಸಾಧಿಸಲು ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಬಿ.ವೈ.ಶ್ರೀನಿವಾಸ್, ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ.ಪುತ್ರ, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಜಂಟಿ ಕೃಷಿ ನಿರ್ದೇಶಕಿ ರೂಪಾ, ಗ್ರಾಪಂ ಅಧ್ಯಕ್ಷರಾದ ಕೆ.ಎಸ್.ಕೃಷ್ಣಾರೆಡ್ಡಿ, ಎಲ್.ಜಿ.ಮಂಜುನಾಥ, ಮತ್ತಿತರರು ಇದ್ದರು.

ರೈತರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಗತಿಪರ 10 ರೈತರರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಳ್ಳೂರಿನ ಎಂ.ಟಿ.ಮುನೇಗೌಡ, ದಿನ್ನೇಮೇಲಿನಹಳ್ಳಿ ಲಕ್ಷ್ಮಣರೆಡ್ಡಿ, ಕನಗಾನಕೊಪ್ಪ ಕೆ.ಎ.ರಮೇಶ, ಜಂಗಮಶೀಗಹಳ್ಳಿ ಮುನಿನಾರಾಯಣಪ್ಪ, ಬೋಡಿನಾರೇನಹಳ್ಳಿ ಮುದ್ದಣ್ಣ, ಅಡವಿಗೊಲ್ಲವಾರಹಳ್ಳಿ ಜಿ.ಬಿ.ರಾಮಚಂದ್ರಪ್ಪ, ಅರಸನಹಳ್ಳಿ ಗೋವಿಂದಪ್ಪ, ಅಗಲಗುರ್ಕಿ ರಾಮಾಂಜಿನಿ, ಕಣಜೇನಹಳ್ಳಿ ಕೆ.ಅರುಣ್ ಕುಮಾರ್, ನಿಮ್ಮಕಾಯಲಪಲ್ಲಿಯ ಕೃಷ್ಣಪ್ಪಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಯಿತು. ಹಾಗೆಯೇ ಪ್ರತಿ ತಾಲೂಕಿನಿಂದ ತಲಾ 5 ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆಯ ಚೆಕ್, ರೈತರಿಗೆ ಬೆಳೆ ನಷ್ಟ ಪರಿಹಾರದ ಚೆಕ್‌ಗಳನ್ನು ನೀಡಲಾಯಿತು.

ರೈತರಲ್ಲಿ ಜಾಗೃತಿ: ಕಾರ್ಯಕ್ರಮದಲ್ಲಿ ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ ಪದ್ಧತಿ, ಮಣ್ಣಿನ ಗುಣಮಟ್ಟ ಸಂರಕ್ಷಣೆ, ಕೃಷಿಯೊಂದಿಗೆ ಜಾನುವಾರು ಸಾಕಣೆ ಮತ್ತು ಜೇನು ಸಾಕಣೆಯಂತಹ ಉಪ ಕಸಬುಗಳು, ಪ್ರಗತಿಪರ ರೈತರ ಯಶೋಗಾಥೆಗಳನ್ನು ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕಂಡ ದೃಶ್ಯ: ಎತ್ತಿನಗಾಡಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಅದ್ದೂರಿ ಮೆರವಣಿಗೆ, ಕೃಷಿ ಜಮೀನಿನಲ್ಲಿ ಬಿತ್ತನೆ, ತೋಟದಲ್ಲಿನ ಸಿಹಿ ಹಣ್ಣುಗಳ ಸವಿ, ರೈತರೊಂದಿಗೆ ಸಂವಾದ, ಪ್ರಗತಿದಾಯಕ ಕೃಷಿಗೆ ನಾನಾ ಸವಲತ್ತುಗಳ ವಿತರಣೆ, ಊರೆಲ್ಲ ಗ್ರಾಮೀಣ ಸೊಗಡಿನ ಹಬ್ಬದ ವಾತಾವರಣ ಇವು ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಕೃಷಿ ಕಡೆಗೆ ಆಕರ್ಷಿಸಿ, ಆಧುನಿಕ ಕೃಷಿ ಪದ್ಧತಿ ಮತ್ತು ಕೃಷಿ ತಾಂತ್ರಿಕತೆಗಳ ಆಳವಡಿಕೆಯ ಉತ್ತೇಜನದ ನಿಟ್ಟಿನಲ್ಲಿ ತಾಲೂಕಿನ ಎಸ್.ಗೊಲ್ಲಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಕೈಗೊಂಡಿದ್ದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.

ಬಿರುಸಿನ ಕೃಷಿ ಚಟುವಟಿಕೆ: ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಚಿವದ್ವಯರು ಗಮನ ಸೆಳೆದರು. ಇಟ್ಟಪ್ಪನಹಳ್ಳಿಯಲ್ಲಿ ಬೀಜಾಮೃತ, ಜೀವಾಮೃತ, ಪಂಚಗವ್ಯ, ಎರೆಹುಳು ಗೊಬ್ಬರ ತಯಾರಿಕೆ, ಅಜೋಲ ಮತ್ತು ರಸಮೇವು ತಯಾರಿಕೆ ಸೇರಿ ಸಾವಯವ ಕೃಷಿ ಚಟುವಟಿಕೆ ಕುರಿತ ಪ್ರಾತ್ಯಕ್ಷಿಕೆ ವೀಕ್ಷಣೆ, ಎಸ್.ಗೊಲ್ಲಹಳ್ಳಿ ಕೆರೆಗೆ ಮೀನುಮರಿಗಳನ್ನು ಬಿಡುವಿಕೆ, ರೇಷ್ಮೆಹುಳುಗಳಿಗೆ ಸೊಪ್ಪು ಹಾಕುವಿಕೆ, ಖುದ್ದು ರೈತರ ಮೊಬೈಲ್ ಆ್ಯಪ್‌ನಲ್ಲಿ ರಾಗಿ ಬೆಳೆ ಸಮೀಕ್ಷೆ, ಗುಲಾಬಿ ತೋಟದಲ್ಲಿ ಡ್ರೋನ್ ಯಂತ್ರದ ಮೂಲಕ ಔಷಧ ಸಿಂಪಡಣೆ, ಬಳಿಕ ರಾಸುಗಳಿಗೆ ಹಸಿರು ಮೇವು ಹಾಕುವುದು, ಹೊನ್ನಗಿರಿಯಪ್ಪನಹಳ್ಳಿಯಲ್ಲಿ ಹುರಳಿ, ಸೌತೆಕಾಯಿ ಹಾಗೂ ಮೇವಿನ ಜೋಳದ ಬಿತ್ತನೆ ಬೀಜ ಬಿತ್ತುವುದು ಸೇರಿ ನಾನಾ ಚಟುವಟಿಕೆಯ ಮೂಲಕ ರೈತರೊಂದಿಗೆ ಬೆರೆಯಲಾಯಿತು. ಇನ್ನು ಮಾರಪ್ಪನಹಳ್ಳಿಯ ತೋಟದಲ್ಲಿ ದ್ರಾಕ್ಷಿ ಕಟಾವು, ನಲ್ಲಗುಟ್ಟಹಳ್ಳಿಯಲ್ಲಿ ಸೀಬೆ ಹಣ್ಣುಗಳನ್ನು ಕಟಾವು ಮಾಡಿ ಹಣ್ಣಿನ ರುಚಿ ಸವಿದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸವಲತ್ತು ವಿತರಣೆ: ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಸಹಾಯಧನದಲ್ಲಿ ಹಸುಗಳನ್ನು ಪಡೆಯಲು 35 ಲಾನುಭವಿಗಳಿಗೆ ಹಾಗೂ ಕುರಿಗಳನ್ನು ಪಡೆಯಲು 19 ಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ಸೇರಿ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಶೀತಲ ಘಟಕ ಉದ್ಘಾಟನೆ: ತಾಲೂಕಿನ ಜಡಲತಿಮ್ಮನಹಳ್ಳಿ ಸಮೀಪದ ರಾಜ್ಯ ಬೀಜ ನಿಗಮ ನಿಯಮಿತ ಕಚೇರಿ ಆವರಣದಲ್ಲಿ 3.76 ಕೋಟಿ ರೂಪಾಯಿ ವೆಚ್ಚದ ಸಮಗ್ರ ಕೃಷಿ ಪದ್ಧತಿ ಶ್ರೇಷ್ಠತೆ ಕೇಂದ್ರ ಹಾಗೂ 9.15 ಕೋಟಿ ರೂಪಾಯಿ ವೆಚ್ಚದ ಶೀತಲ ಘಟಕದ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಬಿಜೆಪಿಯನ್ನು ಬೈಯುವುದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭಾವನೆಯು ಮೂರ್ಖತನದ ಪರಮಾವಧಿ. ಕಾಂಗ್ರೆಸ್‌ಗೆ ಬೇರೆ ಕೆಲಸ ಇಲ್ಲ. ಟೀಕಿಸುವುದನ್ನೇ ದೊಡ್ಡ ಕೆಲಸ ಎಂದುಕೊಂಡಿದೆ. ಇದಕ್ಕೆ ಜಾತಿ ಧರ್ಮ, ಅನವಶ್ಯಕ ವಿಚಾರಗಳ ಬಗ್ಗೆ ದೊಡ್ಡದಾಗಿ ಚರ್ಚಿಸಿ, ಗೊಂದಲ ಸೃಷ್ಟಿಸುತ್ತಿದೆ. ಬಿಜೆಪಿ ಮಾತ್ರ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಬಿ.ಸಿ.ಪಾಟೀಲ್, ಕೃಷಿ ಸಚಿವ ****** ಈಗಾಗಲೇ ಎರಡು ವರ್ಷದೊಳಗೆ ಎತ್ತಿನಹೊಳೆ ಯೋಜನೆಯ ಮೂಲಕ ಈ ಭಾಗಕ್ಕೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸವಿದೆ. ಇದಕ್ಕೆ ಅನುಮಾನ ವ್ಯಕ್ತಪಡಿಸುವವರಿಗೆ ಏನೂ ಹೇಳುವುದಿಲ್ಲ. ಡಾ ಕೆ.ಸುಧಾಕರ್, ಆರೋಗ್ಯ ಸಚಿವ