ಜಿಲ್ಲೆ

ಭೂ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕ

ಶಿವಮೊಗ್ಗ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ರೈತರನ್ನು ದಿವಾಳಿ ಎಬ್ಬಿಸುವ ಹುನ್ನಾರ ಎಂದು ಬಿಎಸ್​ಪಿ(ಬಹುಜನ ಸಮಾಜ ಪಾರ್ಟಿ) ಜಿಲ್ಲಾಧ್ಯಕ್ಷ ಸಿ.ಡಿ.ಶಿವಪ್ಪ ಆರೋಪಿಸಿದರು.

ರೈತರಲ್ಲದವರು ಭೂಮಿ ಖರೀದಿಸುವ ಕಾನೂನಿನಿಂದ ಇಡೀ ರೈತ ಕುಲವೇ ನಾಶವಾಗಿ ಆಹಾರ ಭದ್ರತೆಗೆ ಅಪಾಯ ತಂದೊಡ್ಡಲಿದೆ. ಹಾಗಾಗಿ ರಾಜ್ಯಪಾಲರು ತಿದ್ದುಪಡಿ ಕಾಯ್ದೆಗೆ ಸಹಿ ಹಾಕದೇ ವಾಪಾಸ್ ಕಳುಹಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

25 ಲಕ್ಷ ರೂ. ಆದಾಯ ಮಿತಿ ತೆಗೆದು ಹಾಕಿರುವುದು ಉಳುವವನೇ ಭೂ ಒಡೆಯ ಕಾಯ್ದೆಗೆ ತದ್ವಿರುದ್ಧವಾಗಿದೆ. ಈ ಹಿಂದೆ ಸಾಮಾಜಿಕ ಕಲ್ಪನೆಯಡಿ ಉಳುವವನಿಗೆ ಭೂಮಿ ಕೊಡುವುದು ಮತ್ತು ಒಬ್ಬ ರೈತ ಜಮೀನು ಹೊಂದಲು ಮಿತಿ ಹಾಕಿ ಕಾಯ್ದೆ ರೂಪಿಸಲಾಗಿತ್ತು. ಹಣ ಉಳ್ಳವರು ಬಹುತೇಕ ಕಪ್ಪು ಹಣವಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು ಜತೆಗೆ ದೊಡ್ಡ ಉದ್ದಿಮೆದಾರರು, ಕೋಟ್ಯಧೀಶರಿಗೆ ಈ ಕಾಯ್ದೆ ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿದರು.

ತಿದ್ದುಪಡಿ ಕಾಯ್ದೆ ಜಾರಿಯಾದರೆ ರಿಯಲ್ ಎಸ್ಟೇಟ್, ಖಾಸಗಿ ಶಾಲೆಗಳು, ಆಸ್ಪತ್ರೆಗಳು, ಮೋಜು ಮಸ್ತಿಗೆ ರೆಸಾರ್ಟ್​ಗಳು ತಲೆ ಎತ್ತುವುದರಿಂದ ಕೃಷಿ ಭೂಮಿ ನಾಶವಾಗಿ ಆಹಾರದ ಅಭಾವ ತಲೆದೋರುತ್ತದೆ. ಈ ಕಾಯ್ದೆ ಕಾರ್ಪೆರೇಟ್ ಕಂಪನಿಗಳಿಗೆ, ಗುತ್ತಿಗೆ ಕೃಷಿ ಕಾಯ್ದೆಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗುತ್ತದೆಯೇ ವಿನಃ ಕೃಷಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಎಚ್.ಎನ್.ಶ್ರೀನಿವಾಸ್, ಡಿ.ರವಿ, ಸಿ.ಕೃಷ್ಣಪ್ಪ, ಸಿದ್ದೇಶ್, ಮಾರುತಿ, ಲಕ್ಷ್ಮೀಪತಿ ಇದ್ದರು.